ಶಾಲಾ ಟ್ಯಾಂಕರ್ಗೆ ವಿಷ ಬೆರೆಸಿದ ಪ್ರಕರಣ ಮನುಷ್ಯತ್ವ ಮರೆತ ಕೋಮುವಾದಿಗಳ ಕ್ರೂರ ಕೃತ್ಯ- ಎಚ್.ಎಂ.ರೇವಣ್ಣ
ಬೆಂಗಳೂರು: ಬೆಳಗಾವಿಯ ಸವದತ್ತಿಯಲ್ಲಿ, ಮುಸ್ಲಿಂ ಮುಖ್ಯೋಪಾಧ್ಯಾಯರನ್ನು ವರ್ಗಾವಣೆ ಮಾಡುವ ದುರುದ್ದೇಶದಿಂದ ಶ್ರೀರಾಮ ಸೇನೆಯ ತಾಲೂಕು ಅಧ್ಯಕ್ಷ ಸೇರಿದಂತೆ ಮೂವರು, ಶಾಲಾ ಟ್ಯಾಂಕರ್ಗೆ ವಿಷ ಹಾಕಿದ್ದಾರೆ. ಈ ಘಟನೆಯಲ್ಲಿ 12 ಮಕ್ಕಳು ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, ಗ್ಯಾರೆಂಟಿ ಅನುಷ್ಠಾನ ಸಮಿತಿಯ ರಾಜ್ಯಾಧ್ಯಕ್ಷರಾದ ಹೆಚ್.ಎಂ.ರೇವಣ್ಣನವರು ಕೃತ್ಯವನ್ನು ಖಂಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬ ಮುಖ್ಯೋಪಾಧ್ಯಾಯನಾಗಿರುವುದನ್ನು ಸಹಿಸದೇ ಆತನನ್ನು ತಮ್ಮ ಊರಿನಿಂದ ಬೇರೆಡೆಗೆ ವರ್ಗಾವಣೆ ಮಾಡಿಸಬೇಕೆಂಬ ದುರುದ್ದೇಶದಿಂದ ಶಾಲಾಮಕ್ಕಳ ಕುಡಿಯುವ ನೀರಿಗೆ ವಿಷ ಹಾಕಿರುವುದು ನಿಜಕ್ಕೂ ಖಂಡನೀಯ. ಈ ಘಟನೆಯಲ್ಲಿ ಹಲವು ಮಕ್ಕಳು ಅಸ್ವಸ್ಥಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿರಲಿಲ್ಲ. ಧಾರ್ಮಿಕ ಮೂಲಭೂತವಾದ, ಕೋಮುವೈಷಮ್ಯ ಎನ್ನುವುದು ಎಂತಹ ಹೀನ ಕೃತ್ಯವನ್ನೂ ಮಾಡಿಸಬಲ್ಲುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ ಎಂದರು.
ಇಂತಹ ಕೋಮುದ್ವೇಷ ಬಿತ್ತುವ ಶ್ರೀರಾಮಸೇನೆಯಂತಹ ಸಂಘಟನೆಗಳ ಈ ಕಾರ್ಯ ಇಡೀ ಮನುಕುಲವೇ ತಲೆ ತಗ್ಗಿಸುವಂತಹುದು. ಈ ಬಗ್ಗೆ ಭಾಜಪದವರು ತುಟಿ ಬಿಚ್ಚದಿರುವುದು ವಿಷಾದನೀಯ ಎಂದರು. ಮುಂದುವರೆದು ಸಾರಿಗೆ ನೌಕರರ ಬೇಡಿಕೆಗಳನ್ನು ಸರ್ಕಾರ ಈಡೇರಿಸಲು ಬದ್ಧವಾಗಿದ್ದು, ಬೇಡಿಕೆಗಳಲ್ಲಿ ಕೆಲವನ್ನು ಈಡೇರಿಸುವ ಭರವಸೆ ನೀಡಿದರೂ ಮುಷ್ಕರ ನಡೆಸುವುದು ಪೂರ್ವಾಗ್ರಹ ಪೀಡಿತ ಪ್ರತಿಭಟನೆಯಾಗಿದೆ. ಹಿಂದಿನ ಸರ್ಕಾರಗಳ ತಪ್ಪಿನಿಂದಾಗಿ ಈ ಸಮಸ್ಯೆ ಉದ್ಭವಿಸಿದೆಯೇ ಹೊರತು ಕಾಂಗ್ರೆಸ್ ಸರ್ಕಾರದ ತಪ್ಪಲ್ಲ. ಈ ತಪ್ಪನ್ನು ಸರಿಪಡಿಸಲು ಸ್ವಲ್ಪ ಸಮಯ ಬೇಕಾಗುತ್ತದೆ. ಇದನ್ನು ಸಾರಿಗೆ ನೌಕರರು ಮನದಟ್ಟು ಮಾಡಿಕೊಳ್ಳಬೇಕಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ವಕೀಲ ಸಿ.ಎಸ್.ದ್ವಾರಕಾನಾಥ್ ಅವರು, ರಾಹುಲ್ ಗಾಂಧಿಯವರಿಗೆ ಸುಪ್ರೀಂ ಹೇಳಿರುವ ಮಾತುಗಳನ್ನು ಖಂಡಿಸಿದರು.
ರಾಹುಲ್ ಗಾಂಧಿಯವರನ್ನು ಕುರಿತು ನಿಜವಾದ ಭಾರತೀಯ ಯಾರು ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಹೇಳಿರುವುದು ವಿಷಾದನೀಯ. ನ್ಯಾಯಾಂಗಕ್ಕೆ ಎಲ್ಲಾ ರೀತಿಯಲ್ಲಿಯೂ ಗೌರವಗಳನ್ನು ನೀಡುತ್ತಾ, ನಿಜವಾದ ಭಾರತೀಯ ಯಾರು ಮತ್ತು ಯಾರಲ್ಲ ಎಂಬುದನ್ನು ನಿರ್ಧರಿಸುವುದು ಅವರ ಕೆಲಸವಲ್ಲ. ಈಗಾಗಲೇ ರಾಹುಲ್ ಗಾಂಧಿಯವರ ಎತ್ತಿರುವ ಪ್ರಶ್ನೆಗಳ ಕುರಿತು ಲೋಕಸಭೆಯಲ್ಲಿ ಚರ್ಚೆಯಾಗಿದೆ. ಅನೇಕ ರಾಷ್ಟ್ರೀಯ ಪತ್ರಿಕೆಗಳು ರಾಹುಲ್ ಗಾಂಧಿಯವರು ಎತ್ತಿರುವ ಪ್ರಶ್ನೆಗಳನ್ನೇ ಎತ್ತಿದ್ದಾರೆ. ಅವರಾರ ಮೇಲೆಯೂ ಮಾನನಷ್ಟ ಮೊಕದ್ದಮೆ ದಾಖಲಾಗಿಲ್ಲ. ಅಂದರೆ ಅದನ್ನು ಕೇಂದ್ರ ಒಪ್ಪಿದೆ ಅಂತಲೇ ಅರ್ಥ, ಹೀಗಾಗಿ ರಾಹುಲ್ ಗಾಂಧಿಯವರ ಹೇಳಿಕೆಯಲ್ಲಿ ಯಾವ ತಪ್ಪಿದೆ? ಸುಪ್ರೀಂಕೋರ್ಟ್ ನ ನ್ಯಾಯಾಧೀಶ ಸ್ಥಾನದಲ್ಲಿ ಕುಳಿತು ಇಂತಹ ಮಾತನಾಡುವುದು ಸರಿಯಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ವಿ.ಎಸ್.ಉಗ್ರಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.