ರಸ್ತೆ, ಸೇತುವೆ, ವಿದ್ಯುತ್ ಪುನಸ್ರ್ಥಾಪಿಸಲು, ಪುನರ್ ನಿರ್ಮಾಣಕ್ಕೆ
ಪ್ರಸ್ತಾವನೆ ಸಲ್ಲಿಸಲು ಈಶ್ವರ ಖಂಡ್ರೆ ಆದೇಶ
ಬೀದರ, ಅಗಸ್ಟ್ 19 (ಕರ್ನಾಟಕ ವಾರ್ತೆ):- ಬೀದರ್ ಜಿಲ್ಲೆಯಲ್ಲಿ ಕಳೆದ 2-3 ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ಕಡಿತಗೊಂಡಿರುವ ರಸ್ತೆ ಮತ್ತು ವಿದ್ಯುತ್ ಸಂಪರ್ಕವನ್ನು ಕೂಡಲೇ ಪುನರ್ ಸ್ಥಾಪಿಸುವಂತೆ ಮತ್ತು ವಿಳಂಬವಿಲ್ಲದೆ ಪರಿಹಾರ ವಿತರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಜಿಲ್ಲಾಡಳಿತಕ್ಕೆ ಆದೇಶ ನೀಡಿದ್ದಾರೆ.
ವಿಧಾನಮಂಡಳ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ಸಚಿವರು, ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ತುರ್ತು ಸಭೆಯಲ್ಲಿ, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿ ಸಿಇಓ, ತಹಶೀಲ್ದಾರ್ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳಿಂದ ಮಳೆ ಹಾನಿಯ ಸ್ಥಿತಿ-ಗತಿ ಮತ್ತು ರಕ್ಷಣೆ ಹಾಗೂ ಪರಿಹಾರ ಕಾಮಗಾರಿಗಳ ಮಾಹಿತಿ ಪಡೆದರು.
ಮಳೆ ಮತ್ತು ಪ್ರವಾಹದಂತ ಪರಿಸ್ಥಿತಿಯಿಂದ ಜಾನುವಾರುಗಳು ಮೃತಪಟ್ಟಿದ್ದು, ಮನೆಗಳಿಗೆ ಹಾನಿ ಆಗಿದೆ, ಈ ಬಗ್ಗೆ ಸಮಗ್ರ ವರದಿ ಸಿದ್ಧಪಡಿಸಲು ಮತ್ತು ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ, ದವಸ, ಧಾನ್ಯ, ಬಟ್ಟೆ, ಪಾತ್ರೆ ಇತ್ಯಾದಿ ಹಾಳಾಗಿರುವ ಪ್ರಕರಣಗಳಲ್ಲಿ ತುರ್ತಾಗಿ 5 ಸಾವಿರ ರೂಪಾಯಿ ಪರಿಹಾರ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಮನೆಗಳಿಗೆ ಆಗಿರುವ ಹಾನಿಯ ಪ್ರಮಾಣದ ನಿರ್ಧರಣೆಯ ಬಗ್ಗೆ ಎಂಜಿನಿಯರುಗಳನ್ನು ತತ್ ಕ್ಷಣವೇ ಕಳುಹಿಸಿ 48 ಗಂಟೆಯೊಳಗೆ ವರದಿ ತರಿಸಿಕೊಂಡು, ವಿಳಂಬ ಇಲ್ಲದಂತೆ ಎನ್.ಡಿ.ಆರ್.ಎಫ್. ಮತ್ತು ಎಸ್.ಡಿ.ಆರ್.ಎಫ್. ನಿಯಮಗಳ ರೀತ್ಯ ಪರಿಹಾರ ನೀಡಲು ಕ್ರಮ ವಹಿಸುವಂತೆ ಆದೇಶಿಸಿದರು.
ಕೃಷಿ, ತೋಟಗಾರಿಕೆ ಮತ್ತು ರೇμÉ್ಮ ಬೆಳೆಗೆ ಹಾನಿ ಆಗಿದ್ದು, ಈ ಬಗ್ಗೆ ಸಮಗ್ರ ಸಮೀಕ್ಷೆ ನಡೆಸಿ, ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಕಳಿಸಲು ಸೂಚಿಸಿದ ಅವರು, ಸೇತುವೆಗಳು ಕುಸಿದು ರಸ್ತೆ ಸಂಪರ್ಕ ಕಳೆದುಕೊಂಡಿರುವ ಗ್ರಾಮಗಳಿಗೆ ತುರ್ತಾಗಿ ಸಂಪರ್ಕ ಕಲ್ಪಿಸಲು ತಿಳಿಸಿದ ಸಚಿವರು ಪುನರ್ ನಿರ್ಮಾಣ ಮಾಡುವ ಅಗತ್ಯ ಇರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕೂಡಲೇ ಪ್ರಸ್ತಾವನೆ ಸಲ್ಲಿಸಲು ತಿಳಿಸಿದರು.
ಕಳಪೆ ಕಾಮಗಾರಿಯಿಂದ ರಸ್ತೆ, ಸೇತುವೆ ಇತ್ಯಾದಿ ಹಾಳಾಗಿದ್ದರೆ ಆ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆಯೂ ತಿಳಿಸಿದ ಈಶ್ವರ ಖಂಡ್ರೆ, ಇಂದು ಸಂಜೆ ಅಥವಾ ರಾತ್ರಿಯೊಳಗೆ ವಿದ್ಯುತ್ ಸಂಪರ್ಕಗಳ ಪುನರ್ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು, ಆಗದಿದ್ದರೆ ವಾಟ್ಸ್ ಅಪ್ ಮೂಲಕ ಮಾಹಿತಿ ನೀಡಬೇಕು ಎಂದು ವಿದ್ಯುತ್ ಸರಬರಾಜು ಇಲಾಖೆಗೆ ಸೂಚಿಸಿದರು.
ಅಂಗನವಾಡಿ, ಸರ್ಕಾರಿ ಶಾಲೆ ಮತ್ತು ಕಾಲೇಜು ಕಟ್ಟಡಗಳ ಛಾವಣಿಯಲ್ಲಿ ಸೋರಿಕೆ ಆಗುತ್ತಿದ್ದರೆ, ಕೊಠಡಿ ಅಥವಾ ಕಟ್ಟಡ ಶಿಥಿಲವಾಗಿದ್ದರೆ ಕೂಡಲೇ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲು ಮತ್ತು ಈ ಬಗ್ಗೆ ಸಮಗ್ರ ಮಾಹಿತಿ ತರಿಸಿಕೊಂಡು ವರದಿ ಸಲ್ಲಿಸಲು ತಿಳಿಸಿದ ಸಚಿವರು, ಯಾವುದೇ ಶಾಲೆಯಲ್ಲಿ ದುರಂತ ಸಂಭವಿಸಿದರೆ ಸಂಬಂಧಿತ ಶಾಲಾ ಶಿಕ್ಷಣ ಅಧಿಕಾರಿಗಳನ್ನೇ ಹೊಣೆ ಮಾಡುವುದಾಗಿ ಎಚ್ಚರಿಸಿದರು.
ಔರಾದ್, ಕಮಲನಗರ ಸೇರಿದಂತೆ ಹಲವೆಡೆ ಸೇತುವೆಗಳು ಕೊಚ್ಚಿಹೋಗಿದ್ದರೂ, ಕೆಲವರು ಅದೇ ಮಾರ್ಗವಾಗಿ ತಮ್ಮ ಖಾಸಗಿ ವಾಹನದಲ್ಲಿ ಸಂಚರಿಸುತ್ತಿದ್ದು, ಅನಾಹುತ ಸಂಭವಿಸಿದಂತೆ ಪೋಲೀಸ್ ಕಾವಲು ಹಾಕಲು, ತಾತ್ಕಾಲಿಕ ತಡೆಗೋಡೆ ಅಳವಡಿಸಲು ಹಾಗೂ ಸೇತುವೆ ದುರಸ್ತಿಗೆ ತುರ್ತು ಕ್ರಮ ಕೈಗೊಳ್ಳಲು ಜಿಲ್ಲಾ ಪೆÇಲೀಸ್ ವರಿಷ್ಟಾಧಿಕಾರಿಗಳು ಸ್ಪಷ್ಟ ನಿರ್ದೇಶನ ನೀಡಿದರು.
ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಸೂಚನೆ: ಪ್ರವಾಹ ಪರಿಸ್ಥಿತಿ ಉಂಟಾದಾಗ, ಮನೆಗಳಿಗೆ ನೀರು ನುಗ್ಗಿದಾಗ ನಾನಾ ಬಗೆಯ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ಔರಾದ್, ಕಮಲನಗರ ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ಮಳೆ ನೀರು ನುಗ್ಗಿರುವ ಪ್ರದೇಶಗಳಲ್ಲಿ ಸಮುದಾಯ ಆರೋಗ್ಯದ ಬಗ್ಗೆ ನಿಗಾ ಇಡುವಂತೆ ಸೂಚಿಸಿದರು. ಜಿಲ್ಲೆಯಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಯಾವುದೇ ಆಸ್ಪತ್ರೆ ಸೋರುತ್ತಿದ್ದರೆ, ಗೋಡೆ ಶಿಥಿಲವಾಗಿದ್ದರೆ ರೋಗಿಗಳನ್ನು ಸ್ಥಳಾಂತರಿಸುವಂತೆ ಸೂಚಿಸಿದರು.
ನೆರೆಯ ಮಹಾರಾಷ್ಟ್ರದಿಂದ ನದಿಗೆ ನೀರು ಹರಿಯ ಬಿಟ್ಟರೆ ಮತ್ತೆ ಸಮಸ್ಯೆ ಎದುರಾಗುತ್ತದೆ. ಹೀಗಾಗಿ ಕೆಳದಂಡೆಯ ಜನರಿಗೆ ಮುನ್ನೆಚ್ಚರಿಕೆ ನೀಡಲು ಸೂಚಿಸಿದ ಈಶ್ವರ ಖಂಡ್ರೆ, ಕೆಲವೇ ಮನೆಗಳಿರುವ ಕಡೆ ಪದೇ ಪದೇ ಪ್ರವಾಹದಿಂದ ಸಮಸ್ಯೆ ಎದುರಾಗುವುದನ್ನು ತಪ್ಪಿಸಲು ಮತ್ತು ಶಾಶ್ವತ ಪರಿಹಾರ ಕಲ್ಪಿಸಲು ಅವರಿಗೆ ಬೇರೆಡೆ ಸರ್ಕಾರಿ ಜಮೀನು ನೀಡಿ ಸ್ಥಳಾಂತರಿಸಲು ಪ್ರಸ್ತಾವನೆ ಸಲ್ಲಿಸಲು ತಿಳಿಸಿದರು.
ಎಲ್ಲ ಗ್ರಾಮ ಪಂಚಾಯ್ತಿಯ ಪಿಡಿಓಗಳಿಗೆ ಕೇಂದ್ರ ಸ್ಥಾನದಲ್ಲಿಯೇ ಇರುವಂತೆ ಮತ್ತು ಮಳೆ ಪೀಡಿತ ಪ್ರದೇಶಗಳಿಗೆ ತೆರಳಿ ರಕ್ಷಣೆ ಪರಿಹಾರ ಕಾಮಗಾರಿ ಕೈಗೊಳ್ಳುವಂತೆ ಸೂಚಿಸುವಂತೆ ತಿಳಿಸಿದ ಸಚಿವರು, ಕೆರೆಯ ದಂಡೆ ಒಡೆದಿದ್ದರೆ ಕೂಡಲೇ ತಜ್ಞರನ್ನು ಕಳುಹಿಸಿ, ದುರಸ್ತಿ ಮಾಡಲು ನಿರ್ದೇಶನ ನೀಡಿದರು. ಈ ಕಾಮಗಾರಿಯಲ್ಲಿ ಲೋಪ ಆಗದಂತೆ ಎಚ್ಚರಿಕೆ ವಹಿಸಲು ತಿಳಿಸಿದರು.
ಈ ಸಭೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಗಿರೀಶ್ ಬದೋಲೆ, ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಪ್ರದೀಪ್ ಗುಂಟಿ, ಜಿಲ್ಲಾ ವೈದ್ಯಾಧಿಕಾರಿ ಡಾ. ನಿರ್ಗುಡೆ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
Samruddiya Nele is a digital magazine, to connect with people with latest updates on every moment news, not only to serve the needy but also to serve the nation.