ಬೀದರ, ಅಗಸ್ಟ್ 16 (ಕರ್ನಾಟಕ ವಾರ್ತೆ):- ಕಳೆದ 15 ವರ್ಷಗಳಿಂದ ಜಿಲ್ಲೆಯ ಸಾರ್ವಜನಿಕರ ಬೇಡಿಕೆಯಾಗಿದ್ದ ಸುಸಜ್ಜಿತ ಜಿಲ್ಲಾಡಳಿತ ಸಂಕೀರ್ಣ ನಿರ್ಮಾಣಕ್ಕೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಹಾಗೂ ಪೌರಾಡಳಿತ ಸಚಿವರಾದ ರಹೀಮ್ ಖಾನ್ ಇಂದು ಹಳೆಯ ಜಿಲ್ಲಾಧಿಕಾರಿಗಳ ಆವರಣದಲ್ಲಿ ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ನೀಡಿದರು.
ನಂತರ ಸಚಿವರಾದ ಈಶ್ವರ ಬಿ.ಖಂಡ್ರೆ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಾ, ಕಳೆದ ಏಪ್ರಿಲ್.16 ರಂದು ಮುಖ್ಯಮಂತ್ರಿಗಳು ಜಿಲ್ಲಾಡಳಿತ ಸಂಕೀರ್ಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಇಂದು ಔಪಚಾರಿಕವಾಗಿ ಪೂಜೆ ಸಲ್ಲಿಸಿ ಭವ್ಯ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಯಾವುದೇ ಅಡೆತಡೆ ಬರದಂತೆ ಸುಲಲಿತವಾಗಿ ಕಾಮಗಾರಿ ಪೂರ್ಣಗೊಳ್ಳುವ ನಿಟ್ಟಿನಲ್ಲಿ ಕೃಷ್ಣ ಜನ್ಮಾಷ್ಟಮಿ ದಿನದಂದು ಚಾಲನೆ ನೀಡಲಾಗಿದೆ ಎಂದರು.
ಮೊದಲ ಹಂತದಲ್ಲಿ 8 ಕಚೇರಿಗಳ ಕಟ್ಟಡಗಳು ಆರಂಭವಾಗಲಿದೆ, ಎರಡನೇ ಹಂತದಲ್ಲಿ ಉಳಿದ ಕಚೇರಿಗಳನ್ನು ಸಹ ಆರಂಭಿಸಲಾಗುವುದು. ಕೊಟ್ಟ ಮಾತಿನಂತೆ ನಡೆಯುತ್ತಿದ್ದೇವೆ. ಬರುವ ದಿನಗಳಲ್ಲಿ ಭವ್ಯ ಕ್ರೀಡಾಂಗಣವನ್ನು ಸಹ ನಿರ್ಮಿಸಲಾಗುವುದು. ಬೀದರನ್ನು ಮಹಾನಗರ ಪಾಲಿಕೆಯನ್ನಾಗಿ ಘೋಷಿಸಲಾಗಿದ್ದು ಹೆಚ್ಚಿನ ಅನುದಾನ ತರಲಾಗುವುದು. ಸ್ವಚ್ಛ ಸುಂದರ, ಹಸಿರು ಬೀದರ ನಿರ್ಮಿಸಲು ಸರಕಾರ ಬದ್ಧವಾಗಿದೆ. ಹಸಿರು ಹೆಚ್ಚಿಸಲು ಪ್ಲಾಸ್ಟಿಕಮುಕ್ತ ಬೀದರಕ್ಕೆ ಸಾರ್ವಜನಿಕರು ಕೈಜೊಡಿಸಬೇಕೆಂದು ಸಚಿವ ಈಶ್ವರ ಬಿ.ಖಂಡ್ರೆ ನುಡಿದರು.
ಸಚಿವರಾದ ರಹೀಮ್‌ಖಾನ್ ಮಾತನಾಡಿ, ಉತ್ತಮ ಸುಸಜ್ಜಿತ ಭವ್ಯ ಪ್ರಜಾಸೌಧ ನಿರ್ಮಿಸುವುದು, ಮಹಾನಗರ ಪಾಲಿಕೆಗೆ 200 ಕೋಟಿ ರೂ. ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ವಿನಂತಿಸಲಾಗಿದೆ. ಐಎಎಸ್ ಅಧಿಕಾರಿಯನ್ನು ಹಾಗೂ 400 ಸಿಬ್ಬಂದಿಗಳ ನೇಮಕಕ್ಕೂ ಸಹ ಕ್ರಮಕೈಗೊಳ್ಳಲಾಗುತ್ತಿದೆ. ಅಭಿವೃದ್ಧಿಯ ಜೊತೆ ಪ್ರೀತಿ, ವಿಶ್ವಾಸ ಸೌಹಾರ್ದತೆಯನ್ನು ಬಾಳುವಂತೆ ನೋಡಿಕೊಳ್ಳಲಾಗುತ್ತಿದೆ ಎಂದರು.
ಶಾಸಕರಾದ ಡಾ.ಶೈಲೇಂದ್ರ ಕೆ.ಬೆಲ್ದಾಳೆ ಅವರು ಮಾತನಾಡಿ, ಗುತ್ತಿಗೆದಾರರು ನಿಗದಿತ ಅವಧಿಯೊಳಗೆ ಉತ್ತಮ ಗುಣಮಟ್ಟದ ಪ್ರಜಾಸೌಧ ನಿರ್ಮಿಸಲಿಯೆಂದರು. ಸಾರ್ವಜನಿಕರು ಸೆಲ್ಪಿ ತೆಗೆದುಕೊಳ್ಳುವಂತಹ ಮಾದರಿ ಬೃಹತ್ ಕಟ್ಟಡ ನಿರ್ಮಾಣವಾಗಲಿ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಮಹಮ್ಮದ ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಲೋಕೋಪಯೋಗಿ ಇಲಾಖೆ ಇಇ ಶಿವಶಂಕರ ಕಾಮಶೆಟ್ಟಿ ವೇದಿಕೆಯಲ್ಲಿ ಪಾಲ್ಗೊಂಡಿದ್ದರು.
Samruddiya Nele is a digital magazine, to connect with people with latest updates on every moment news, not only to serve the needy but also to serve the nation.