
ರಿಯಲ್ ಎಸ್ಟೇಟ್ ವಹಿವಾಟು 2030 ರ ವೇಳೆಗೆ 1 ಟ್ರಿಲಿಯನ್ ಡಾಲರ್ಗೆ ತಲುಪುವ ನಿರೀಕ್ಷೆ ಇದೆ ಎಂದು ಕ್ರೆಡೈ ಕರ್ನಾಟಕ ಅಧ್ಯಕ್ಷ ಭಾಸ್ಕರ್ ಟಿ. ನಾಗೇಂದ್ರಪ್ಪ ಹೇಳಿದರು.
ಬೆಂಗಳೂರಿನಲ್ಲಿ ಈಚೆಗೆ ಆಯೋಜಿಸಿದ್ದ ನಾವಿಗ-8 ಬಿಲ್ಡಿಂಗ್ ಮಟಿರಿಯಲ್ ಎಕ್ಸ್ಪೋ ಉದ್ಘಾಟಿಸಿ ಅವರು ಮಾತನಾಡಿದರು.
ರಿಯಲ್ ಎಸ್ಟೇಟ್ ವಹಿವಾಟು ಹೆಚ್ಚಳದಿಂದ ದೇಶದ ಆರ್ಥಿಕ ಬೆಳವಣಿಗೆ ಜತೆಗೆ ವಲಯದ ಮೇಲಿನ ನಂಬಿಕೆ ಕೂಡ ವೃದ್ಧಿಸಲಿದೆ ಎಂದು ತಿಳಿಸಿದರು.
2014 ರಲ್ಲಿ ರಿಯಲ್ ಎಸ್ಟೇಟ್ ವಲಯವು 200 ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಹೊಂದಿತ್ತು. ಈಗ ಭಾರತೀಯ ರಿಯಲ್ ಎಸ್ಟೇಟ್ ವಲಯವು 650 ಬಿಲಿಯನ್ ಡಾಲರ್ಗೂ ಹೆಚ್ಚು ವಹಿವಾಟು ನಡೆಸುವ ಉದ್ಯಮವಾಗಿದೆ ಎಂದು ತಿಳಿಸಿದರು.
ರಿಯಲ್ ಎಸ್ಟೇಟ್ ಅನ್ನು ಉದ್ಯಮವೆಂದು ಅಧಿಕೃತವಾಗಿ ಗುರುತಿಸಿಲ್ಲವಾದರೂ, ಇಂದು ಹಿಂದೆಂದಿಗಿಂತಲೂ ಹೆಚ್ಚು ಸಂಘಟಿತ, ಪಾರದರ್ಶಕ, ವೃತ್ತಪರ ಹಾಗೂ ಜವಾಬ್ದಾರಿಯುತವಾದ ಉದ್ಯಮವಾಗಿ ಬೆಳೆದಿದೆ ಎಂದು ಹೇಳಿದರು.
ಒಟ್ಟಿಗೆ ಹೋಗುವುದು ಒಂದು ಆರಂಭ, ಒಟ್ಟಿಗೆ ಇರುವುದು ಪ್ರಗತಿ, ಒಟ್ಟಿಗೆ ಕೆಲಸ ಮಾಡುವುದು ಯಶಸ್ಸು ಎಂಬ ಮಾತಿನಂತೆ, ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಸಹಯೋಗ ಸಾಧನೆಯ ಅಡಿಪಾಯವಾಗಿದೆ ಎಂದು ತಿಳಿಸಿದರು.
ಆಸ್ತಿಗಳನ್ನು ಅಭಿವೃದ್ಧಿಪಡಿಸುವುದು, ಗ್ರಾಹಕರೊಂದಿಗೆ ಒಪ್ಪಂದ ಮಾಡಿಕೊಳ್ಳುವುದು ಏನೇ ಇರಲಿ ಅದರ ಯಶಸ್ಸು ಎನ್ನುವುದು ಆಸ್ತಿ ಸಲಹೆಗಾರರು, ಡೆವಲಪರ್ಗಳು, ಯೋಜನಾ ವಾಸ್ತುಶಿಲ್ಪಿಗಳು, ರಚನಾತ್ಮಕ ವಿನ್ಯಾಸಕಾರರು, ಸೇವಾ ಸಲಹೆಗಾರರು, ಹಣಕಾಸು ಸಂಸ್ಥೆಗಳು, ನಗರಾಭಿವೃದ್ಧಿ ಅಧಿಕಾರಿಗಳು ಈ ಎಲ್ಲ ವೃತ್ತಿಪರರನ್ನು ಒಗ್ಗೂಡಿಸುವುದರ ಮೇಲೆ ಅವಲಂಬಿಸಿರುತ್ತದೆ ಎಂದು ತಿಳಿಸಿದರು.
ಮನೆ, ನಿವೇಶನ ಕೊಳ್ಳುವವರು ಈಗ ಹೆಚ್ಚು ಮಾಹಿತಿಯುಳ್ಳವರು ಹಾಗೂ ವಿವೇಚನಾಶೀಲರಾಗಿದ್ದಾರೆ. ಕೋವಿಡ್ ನಂತರ ಗ್ರಾಹಕರ ಆಕಾಂಕ್ಷೆ, ನಿರೀಕ್ಷೆಗಳು ಹೆಚ್ಚಾಗಿವೆ. ವಿನ್ಯಾಸ, ಸೌಕರ್ಯ ಅಥವಾ ಯೋಗ ಕ್ಷೇಮ ಯಾವುದೇ ವಿಷಯದಲ್ಲಿ ಗ್ರಾಹಕರು ಸ್ಪಷ್ಟವಾಗಿದ್ದಾರೆ ಎಂದು ಹೇಳಿದರು.
ಕ್ರೆಡೈ ಹುಬ್ಬಳ್ಳಿ- ಧಾರವಾಡ ಅಧ್ಯಕ್ಷ ಗುರುರಾಜ ಅಣ್ಣಿಗೇರಿ, ಕಾರ್ಯದರ್ಶಿ ಸತೀಶ್ ಮುನವಳ್ಳಿ, ಅಧ್ಯಕ್ಷ(ಎಲೆಕ್ಟ್) ಅಮೃತ ಮೆಹರವಾಡೆ, ಖಜಾಂಚಿ ಪ್ರಿಯಾನ್ ಡಿಸೋಜಾ, ಕ್ರೆಡೈ ಕರ್ನಾಟಕ ನಿಕಟಪೂರ್ವ ಅಧ್ಯಕ್ಷ ಪ್ರದೀಪ್ ರಾಯ್ಕರ್, ಬೀದರ್ ಘಟಕದ ಅಧ್ಯಕ್ಷ ರವಿ ಮೂಲಗೆ, ಕಾರ್ಯದರ್ಶಿ ಅನಿಲಕುಮಾರ, ಸದಸ್ಯ ಹಾವಶೆಟ್ಟಿ ಪಾಟೀಲ ಮತ್ತಿತರರು ಇದ್ದರ.