ಸಚಿವದ್ವಯರಿಗೆ ಪದಾಧಿಕಾರಿಗಳಿಂದ ಮನವಿ ಪತ್ರ ಸಲ್ಲಿಕೆ ಪಾಲಿಕೆ ಮನೆ ಬಾಡಿಗೆ ಭತ್ಯೆಗೆ ನೌಕರರ ಸಂಘ ಆಗ್ರಹ
ಬೀದರ್ನಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಬೀದರ್ ಮಹಾನಗರ ಪಾಲಿಕೆ ವ್ಯಾಪ್ತಿಯ ನೌಕರರಿಗೆ ಮಹಾನಗರ ಪಾಲಿಕೆ ಮನೆ ಬಾಡಿಗೆ ಮತ್ತು ಸಿಸಿಎ ಭತ್ಯೆ ಜಾರಿಗೊಳಿಸುವಂತೆ ಪೌರಾಡಳಿತ ಸಚಿವ ರಹೀಂಖಾನ್ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಬೀದರ್ನಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಬೀದರ್ ಮಹಾನಗರ ಪಾಲಿಕೆ ವ್ಯಾಪ್ತಿಯ ನೌಕರರಿಗೆ ಮಹಾನಗರ ಪಾಲಿಕೆ ಮನೆ ಬಾಡಿಗೆ ಮತ್ತು ಸಿಸಿಎ ಭತ್ಯೆ ಜಾರಿಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಬೀದರ್ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ ಮಹಾನಗರ ಪಾಲಿಕೆ ದರದಂತೆ ಮನೆ ಬಾಡಿಗೆ ಭತ್ಯೆ ಹಾಗೂ ಸಿಸಿಎ ಭತ್ಯೆ ನೀಡಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಆಗ್ರಹಿಸಿದೆ.
ಸಂಘದ ಪದಾಧಿಕಾರಿಗಳು ನಗರದಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಪೌರಾಡಳಿತ ಸಚಿವ ರಹೀಂಖಾನ್ ಅವರನ್ನು ಭೇಟಿ ಮಾಡಿ ಈ ಕುರಿತು ಪ್ರತ್ಯೇಕ ಮನವಿ ಪತ್ರ ಸಲ್ಲಿಸಿದರು.
ಬಿ ವರ್ಗದ ನಗರಗಳಾದ ಮೈಸೂರು, ಹುಬ್ಬಳ್ಳಿ, ಧಾರವಾಡ, ಕಲಬುರಗಿ, ಬೆಳಗಾವಿ, ಮಂಗಳೂರು ಹಾಗೂ ಮೇಲ್ದರ್ಜೆಗೆ ಏರಿಸಲಾದ ಮಹಾನಗರ ಪಾಲಿಕೆಗಳ ವ್ಯಾಪ್ತಿಯ ನೌಕರರಿಗೆ ಈಗಾಗಲೇ ಅದಕ್ಕೆ ಅನುಗುಣವಾದ ಮನೆ ಬಾಡಿಗೆ ಭತ್ಯೆ ಹಾಗೂ ಸಿಸಿಎ ಭತ್ಯೆ ಕೊಡಲಾಗುತ್ತಿದೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಬಿರಾದಾರ ಚಿದ್ರಿ ಗಮನ ಸೆಳೆದರು.
ಬೀದರ್ ನಗರಸಭೆಯನ್ನು 2025ರ ಏಪ್ರಿಲ್ 15 ರಂದು ಮಹಾನಗರ ಪಾಲಿಕೆಯನ್ನಾಗಿ ಘೋಷಿಸಲಾಗಿದೆ. ಹೀಗಾಗಿ ಮಹಾನಗರ ಪಾಲಿಕೆ ಅಧಿಸೂಚನೆ ದಿನಾಂಕದಿಂದ ಅನ್ವಯಿಸುವಂತೆ ಮಹಾನಗರ ಪಾಲಿಕೆಯ ಮನೆ ಬಾಡಿಗೆ ಭತ್ಯೆ, ಸಿಸಿಎ ಭತ್ಯೆ ಹಾಗೂ ಇತರ ಭತ್ಯೆ ಜಾರಿಗೊಳಿಸಬೇಕು ಎಂದು ಬೇಡಿಕೆ ಮಂಡಿಸಿದರು.
ಸಚಿವದ್ವಯರು ತಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸೋಮಶೇಖರ ಬಿರಾದಾರ ಚಿದ್ರಿ ತಿಳಿಸಿದರು.
ಸಂಘದ ರಾಜ್ಯ ಪರಿಷತ್ ಸದಸ್ಯ ರಾಜಕುಮಾರ ಮಾಳಗೆ, ಖಜಾಂಚಿ ದೇವಪ್ಪ ಚಾಂಬೋಳೆ, ಜಿಲ್ಲಾ ಘಟಕದ ಗೌರವಾಧ್ಯಕ್ಷ ಸೂರ್ಯಕಾಂತ ಬಿರಾದಾರ, ಕಾರ್ಯಾಧ್ಯಕ್ಷ ಶಿವರಾಜ ಕಪಲಾಪುರೆ, ಹಿರಿಯ ಉಪಾಧ್ಯಕ್ಷ ಗೌತಮ, ಉಪಾಧ್ಯಕ್ಷ ಮಕರಂದ ಕುಲಕರ್ಣಿ, ಸಹ ಕಾರ್ಯದರ್ಶಿ ಮನೋಹರ ಕಾಶಿ, ಗೌರವ ಸಲಹೆಗಾರ ದಿಲೀಪಕುಮಾರ ಡೊಂಗರಗೆ, ನಿರ್ದೇಶಕ ಕುಶಾಲರಾವ್ ಮರಕಲ್, ಇತರ ಪದಾಧಿಕಾರಿಗಳು ಹಾಗೂ ನೌಕರರು ಹಾಜರಿದ್ದರು.