ಪ್ರಸೂತಿ, ಸ್ತ್ರೀ ರೋಗ ತಜ್ಞರ ಸಮ್ಮೇಳನ ಉದ್ಘಾಟನೆ: ಸಚಿವ ಈಶ್ವರ ಖಂಡ್ರೆ ಕಿವಿಮಾತು ತಾಯಿ-ಮಕ್ಕಳ ಆರೋಗ್ಯ ಕಾಳಜಿ ವಹಿಸಿ
ಬೀದರ್ನ ಬ್ರಿಮ್ಸ್ ಸಭಾಂಗಣದಲ್ಲಿ ರಾಜ್ಯ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರ ಉತ್ತರ ವಲಯ ಸಮ್ಮೇಳನ ಹಾಗೂ ಕಾರ್ಯಾಗಾರವನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿದರು

ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞರು ತಾಯಿ ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಇಲ್ಲಿಯ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಎರಡು ದಿನಗಳ ರಾಜ್ಯ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರ ಉತ್ತರ ವಲಯ ಸಮ್ಮೇಳನ ಹಾಗೂ ಕಾರ್ಯಾಗಾರವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಆಸ್ಪತ್ರೆಗಳ ವಿಭಾಗಗಳಲ್ಲಿ ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞರ ವಿಭಾಗದ ಪಾತ್ರ ಬಹಳ ಮಹತ್ವದ್ದಾಗಿದೆ. ತಾಯಿ-ಮಗುವಿನ ಸುರಕ್ಷತೆ ಹಾಗೂ ರಕ್ಷಣೆಯ ಗುರುತರ ಜವಾಬ್ದಾರಿ ಈ ವಿಭಾಗದ ಮೇಲಿದೆ ಎಂದು ತಿಳಿಸಿದರು.
ಆರೋಗ್ಯವಿದ್ದರೆ ಎಲ್ಲವೂ ಇದ್ದ ಹಾಗೆ. ಸದ್ಯ ಸದೃಢ ಆರೋಗ್ಯ ಕಾಯ್ದುಕೊಳ್ಳಲು ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾದ ಅಗತ್ಯ ಇದೆ ಎಂದು ಹೇಳಿದರು.
ಸಮ್ಮೇಳನವು ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞರ ಕ್ಷೇತ್ರದಲ್ಲಿನ ಹೊಸ ಬದಲಾವಣೆಗಳ ಮೇಲೆ ಬೆಳಕು ಚೆಲ್ಲಲಿದೆ. ವಿಭಾಗದ ಸೇವೆಯ ಗುಣಮಟ್ಟ ಸುಧಾರಣೆಗೂ ವೇದಿಕೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರ ಸಂಘದ ಅಧ್ಯಕ್ಷ ಡಾ. ದುರ್ಗಾದಾಸ್ ಅಸ್ರಣ್ಣ ಮಾತನಾಡಿ, ಸಂಘ 34 ವರ್ಷಗಳಿಂದ ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞರ ಹಿತ ರಕ್ಷಣೆಗೆ ಶ್ರಮಿಸುತ್ತಿದೆ. ಬೀದರ್ನಲ್ಲಿ ಸಂಘಟಿಸಿರುವ ಸಮ್ಮೇಳನ ಮೊದಲ ಸಮ್ಮೇಳನವಾಗಿದ್ದು, ಇದರ ಶ್ರೇಯ ಬೀದರ್ ಘಟಕಕ್ಕೆ ಸಲ್ಲುತ್ತದೆ ಎಂದು ತಿಳಿಸಿದರು.
ಪೌರಾಡಳಿತ ಹಾಗೂ ಹಜ್ ಸಚಿವ ರಹೀಂಖಾನ್, ಸಂಸದ ಸಾಗರ್ ಖಂಡ್ರೆ, ಬಿಡಿಎ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ನಗರಸಭೆ ಅಧ್ಯಕ್ಷ ಮುಹಮ್ಮದ್ ಗೌಸ್, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕಿ ಡಾ. ಸುಜಾತಾ ರಾಠೋಡ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗಿರೀಶ್ ಬದೋಲೆ, ಬ್ರಿಮ್ಸ್ ಮುಖ್ಯ ಆಡಳಿತಾಧಿಕಾರಿ ಸುರೇಖಾ, ನಿರ್ದೇಶಕ ಡಾ. ಶಿವಕುಮಾರ ಶೆಟಕಾರ್, ರಾಜ್ಯ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರ ಸಂಘದ ಮಹಾ ಪೋಷಕ ಡಾ. ಎಂ.ಜಿ. ಹಿರೇಮಠ, ಪೋಷಕ ಡಾ. ನಾಗರಾಜ ಎಚ್, ಡಾ. ಶೋಭಾ ಗುಡಿ, ಡಾ. ರಾಜಶ್ರೀ ಪಲಾಡಿ, ಡಾ. ಬಸವರಾಜ ಪಾಟೀಲ ಅಷ್ಟೂರ, ಡಾ. ಚಂದ್ರಕಾಂತ ಗುದಗೆ, ಡಾ. ಶೋಭಾ ಬೆಂಬಳಗಿ, ಡಾ. ಎಂ.ಬಿ. ಬೆಲ್ಲದ್, ಡಾ. ವಿದ್ಯಾ ಥೊಬ್ಬಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಧ್ಯಾನೇಶ್ವರ ನೀರಗುಡಿ, ಬ್ರಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ. ಶಿವಯೋಗಿ ಬಾಲಿ, ಪ್ರಾಚಾರ್ಯ ಡಾ. ರಾಜೇಶ ಪಾರಾ, ಜಿಲ್ಲಾ ಆಸ್ತ್ರಚಿಕಿತ್ಸಕ ಡಾ. ಎಂ.ಡಿ. ಅಹಮ್ಮದುದ್ದೀನ್, ರಾಜ್ಯ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರ ಸಂಘದ ಬೀದರ್ ಘಟಕದ ಕಾರ್ಯದರ್ಶಿ ಡಾ. ಸವಿತಾ ಎಸ್. ಬಡಿಗೇರ, ಸಂಘಟನಾ ಕಾರ್ಯದರ್ಶಿ ಡಾ. ಹೇಮಲತಾ ಪಾಟೀಲ ಮತ್ತಿತರರು ಇದ್ದರು.
ರಾಜ್ಯ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರ ಸಂಘದ ಬೀದರ್ ಘಟಕದ ಅಧ್ಯಕ್ಷೆ ಡಾ. ಉಮಾ ಬಿ. ದೇಶಮುಖ ಸ್ವಾಗತಿಸಿದರು.
ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರ ಸಂಘ ಹಾಗೂ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವತಿಯಿಂದ ಸಮ್ಮೇಳನ ಹಾಗೂ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ರಾಜ್ಯದ ವಿವಿಧೆಡೆಯ 500 ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ.