ಭಾವ್ಯಕ್ಯತೆ ಗಟ್ಟಿಗೊಳ್ಳಲು ತಿರಂಗಾ ಯಾತ್ರೆ ಪೂರಕ-ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
ಬೀದರ. ಆಗಸ್ಟ್.14 (ಕರ್ನಾಟಕ ವಾರ್ತೆ):- ಭಾವ್ಯಕ್ಯತೆ ಗಟ್ಟಿಗೊಳ್ಳಲು ಹರ್ ಘರ್ ತಿರಂಗಾ ಯಾತ್ರೆ ಪೂರಕವಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದರು.
ಅವರು ಗುರುವಾರದಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಪದವಿ ಪೂರ್ವ ಕಾಲೇಜು, ಶಾಲಾ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ನೆಹರು ಕ್ರೀಡಾಂಗಣದಲ್ಲಿ ತಿರಂಗಾ ಯಾತ್ರೆ ಭಾವೈಕ್ಯತೆಯ ನಡಿಗೆ ಎಂಬ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಸ್ವಾತಂತ್ರ್ಯ ದಿನಾಚರಣೆಯನ್ನುವುದು ದೇಶದ ಬಹು ದೊಡ್ಡ ಹಬ್ಬವಾಗಿದೆ, ನಮ್ಮೆಲ್ಲರಲ್ಲಿ ಸಂತೋಷ – ಸಂಭ್ರಮ ಸಡಗರ ಮನೆಮಾಡುತ್ತದೆ. ಜಗತ್ತಿನಲ್ಲಿಯೇ ಭಾರತ ದೇಶ ಭಾವೈಕ್ಯತೆಗೆ ಹೆಸರಾಗಿದೆ. ನಮ್ಮ ದೇಶದಲ್ಲಿ ಅನೇಕ ಧರ್ಮ, ಜಾತಿ, ಭಾಷೆ , ಸಂಸ್ಕೃತಿ, ಆಚಾರ-ವಿಚಾರಗಳಿದ್ದರು ಭಾವೈಕ್ಯತೆಯಿಂದ ಕೂಡಿ ಬಾಳುವುದನ್ನು ಇಲ್ಲಿ ನೋಡಬಹುದಾಗಿದೆ. ಸರ್ವಜನಾಂಗದ ಶಾಂತಿಯ ತೋಟವನ್ನು ನಮ್ಮ ಬೀದರ ಜಿಲ್ಲೆಯಲ್ಲಿ ಕಾಣಬಹುದು ಹಾಗೂ ಇಲ್ಲಿ ಶಾಂತಿ, ಸಹೋದರತೆ, ಸಹಬಾಳ್ವೆಯನ್ನು ಈ ಜಿಲ್ಲೆಯಲ್ಲಿ ನೋಡಬಹುದು. ಇಂದು ನಾವು ಬೀದರ ಜಿಲ್ಲೆಯಲ್ಲಿ ಅನಾಮಿಯಾ ರೋಗ ಜಾಸ್ತಿ ಆಗಿರುವುದನ್ನು ಕಾಣಬಹುದಾಗಿದೆ. ಆದ್ದರಿಂದ ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ತಪಾಸಣೆ ಮತ್ತು ಚಿಕಿತ್ಸೆಯನ್ನು ಜಿಲ್ಲಾಡಳಿತ ಕೈಗೊಂಡಿದೆ ಎಂದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಗಿರೀಶ್ ಬದೋಲೆ ಅವರು ಮಾತನಾಡಿ, ಎಲ್ಲರೂ ಭಾವೈಕ್ಯತೆಯಿಂದ ಈ ಭಾವೈಕ್ಯತೆಯ ನಡಿಗೆಯಲ್ಲಿ ಭಾಗವಹಿಸಿದ್ದು ಬಹಳ ಸಂತೋಷದ ವಿಷಯವಾಗಿದೆ ಮತ್ತು ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಧನ್ಯವಾದ ತಿಳಿಸಿದರು.
ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಗುರುಬಸವ ಪಟ್ಟದೇವರು ಮಾತನಾಡಿ, ಭಾವೈಕ್ಯತೆಗೆ ಇನ್ನೊಂದು ಹೆಸರೇ ಭಾರತ, ಎಲ್ಲರನ್ನೂ ಪ್ರೀತಿಸುವ, ಗೌರವಿಸುವ ದೇಶ ನಮ್ಮದಾಗಿದೆ ಹಾಗೂ ದೇಶಕ್ಕಾಗಿ ತ್ಯಾಗ- ಬಲಿದಾನ ಮಾಡಿರುವ ದೇಶ ಭಕ್ತರ ದೇಶ ನಮ್ಮದಾಗಿದೆ ಎಂದರು.
ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಮೈಲೂರ ಕ್ರಾಸ್ ಬಳಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ನಡಿಗೆ ಕೈಗೊಂಡರು. ಈ ನಡಿಗೆಯು ಮೈಲೂರ ಕ್ರಾಸ್ ನಿಂದ ಬೊಮ್ಮಗೊಂಡೇಶ್ವರ ವೃತ್ತ, ಭಗತ್ ಸಿಂಗ್ ವೃತ್ತ, ಅಂಬೇಡ್ಕರ್ ವೃತ್ತ, ಜನರಲ್ ಕಾರಿಯಪ್ಪ ವೃತ್ತದ ಮೂಲಕ ನೆಹರು ಕ್ರೀಡಾಂಗಣಕ್ಕೆ ತಲುಪಿತು. ಸಾವಿರಾರು ವಿದ್ಯಾರ್ಥಿಗಳು, ವಿವಿಧ ಧರ್ಮಗಳ ಮುಖಂಡರು, ಇಲಾಖೆಯ ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾವೈಕ್ಯತೆಯ ನಡಿಗೆಯನ್ನು ಸೊಬಗು ಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾAತ ಪುಜಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಎಂ . ಎಸ್.ಶ್ರೀಧರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜುನಾಥ ಸುಳ್ಳೋಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಸಿಂಧೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ ಚನ್ನಶಟ್ಟಿ, ವಿಜಡಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಹಮ್ಮದ್ ಆಸಿಫೊದ್ದಿನ್, ಉದ್ಯಮಿ ಮನಿಪ್ರೀತ್ ಸಿಂಗ್, ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಪೂರ್ಣಿಮಾ ಜಾರ್ಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.