ಬೀದರ್: ಸೇವೆ ಕಾಯಂಗೊಳಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೌರ ನೌಕರರು ಇಲ್ಲಿಯ ಮಹಾನಗರ ಪಾಲಿಕೆ ಎದುರು ಡಿಸೆಂಬರ್ 5 ರಿಂದ ಕೆಲಸ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸಲಿದ್ದಾರೆ.
ಈ ಹಿಂದೆ ಮುಷ್ಕರ ನಡೆಸಿದಾಗ ಪೌರಾಡಳಿತ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ತಿಂಗಳೊಳಗೆ ಆರು ಪ್ರಮುಖ ಬೇಡಿಕೆಗಳನ್ನು ಈಡೇರಿಸುವುದಾಗಿ ಲಿಖಿತ ಭರವಸೆ ನೀಡಿದ್ದರು. ಆದರೆ, ಐದು ತಿಂಗಳು ಕಳೆದರೂ ಭರವಸೆ ಈಡೇರಿಸದ ಕಾರಣ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ರಾಜ್ಯ ಅಧ್ಯಕ್ಷ ಪ್ರಭಾಕರ ಕೆ. ಅವರ ಆದೇಶದ ಮೇರೆಗೆ ಸಂಘದ ಜಿಲ್ಲಾ ಘಟಕ ಹಾಗೂ ಕರ್ನಾಟಕ ರಾಜ್ಯ ಹೊರ ಗುತ್ತಿಗೆ ನೌಕರರ ವತಿಯಿಂದ ಅನಿರ್ದಿಷ್ಟಾವಧಿ ಧರಣಿ ನಡೆಸಲು ನಿರ್ಣಯಿಸಲಾಗಿದೆ ಎಂದು ವಿವಿಧ ಸಂಘಟನೆಗಳ ಪ್ರಮುಖರು ತಿಳಿಸಿದ್ದಾರೆ.
2006ರ ಏಪ್ರಿಲ್ 1ಕ್ಕೆ 10 ವರ್ಷ ಪೂರೈಸಿದ ಕ್ಷೇಮಾಭಿವೃದ್ಧಿ/ದಿನಗೂಲಿ ನೌಕರರನ್ನು ಸಕ್ರಮಗೊಳಿಸಬೇಕು. ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಿ, ಜ್ಯೋತಿ ಸಂಜೀವಿನಿ, ಕೆಜಿಐಡಿ ಹಾಗೂ ಇತರ ಸೌಲಭ್ಯ ಕಲ್ಪಿಸಬೇಕು. ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಕಂಪ್ಯೂಟರ್ ಆಪರೇಟರ್, ನೋಡಲ್ ಎಂಜಿನಿಯರ್, ನೀರು ಸರಬರಾಜು, ವಾಹನ ಚಾಲಕರು, ಲೋಡರ್ಸ್, ಕ್ಲೀನರ್ಸ್, ಸಹಾಯಕರು, ಬೀದಿ ದೀಪ ನಿರ್ವಾಹಕರು, ಅಟೆಂಡರ್, ಸ್ಯಾನಿಟರಿ ಸೂಪರ್ವೈಸರ್, ಗಾರ್ಡನರ್ ಸೇರಿ ವಿವಿಧ ವೃಂದದ ಹೊರ ಗುತ್ತಿಗೆ ನೌಕರರನ್ನು ನೇರ ಪಾವತಿ ವ್ಯವಸ್ಥೆಗೆ ಒಳಪಡಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ಎನ್ನುವಂತೆ ನೌಕರರನ್ನು ಕಾಯಂಗೊಳಿಸಬೇಕು. ಎಲ್ಲ ನೌಕರರಿಗೆ ಎಸ್.ಎಫ್.ಸಿ. ಮುಕ್ತ ನಿಧಿಯಿಂದ ವೇತನ ಕೊಡಬೇಕು ಹಾಗೂ ಹೈಕೋರ್ಟ್ ಆದೇಶ ಪಾಲಿಸಬೇಕು ಎನ್ನುವುದು ಪ್ರಮುಖ ಬೇಡಿಕೆಗಳಾಗಿವೆ ಎಂದು ಹೇಳಿದ್ದಾರೆ.
ಬೇಡಿಕೆ ಈಡೇರುವ ವರೆಗೂ ಹೋರಾಟ ನಡೆಯಲಿದೆ ಎಂದು ತಿಳಿಸಿದ್ದಾರೆ.
ಎಲ್ಲ ವೃಂದಗಳ ಕಾಯಂ ಪೌರ ನೌಕರರು ಸೇರಿದಂತೆ ಎಲ್ಲ ಹೊರ ಗುತ್ತಿಗೆ ನೌಕರರು ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಮುಷ್ಕರದಲ್ಲಿ ಪಾಲ್ಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಹೊರ ಗುತ್ತಿಗೆ ನೌಕರರ ಸಂಘದ ಕಲ್ಯಾಣ ಕರ್ನಾಟಕ ಅಧ್ಯಕ್ಷ ಸಿದ್ರಾಮ ಪಾಟೀಲ, ಬೀದರ್ ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಖಾನ್, ತಾಲ್ಲೂಕು ಘಟಕದ ಅಧ್ಯಕ್ಷ ಮಾರುತಿ, ಪ್ರಧಾನ ಕಾರ್ಯದರ್ಶಿ ಸುಭಾಷ್, ಲೋಕೇಶ್, ಆಶದ್ ಪಟೇಲ್, ದಿಗಂಬರ್, ರಮೇಶ, ಸಂಗಮೇಶ, ಜಿಲ್ಲಾ ವಾಹನ ಚಾಲಕರ ಸಂಘದ ಅಧ್ಯಕ್ಷ ಯೇಸುದಾಸ್, ಕರಬಸಪ್ಪ, ಜಿಲ್ಲಾ ನೀರು ಸರಬರಾಜು ಸಂಘದ ಅಧ್ಯಕ್ಷ ರಾಜಕುಮಾರ, ಮನೋಹರ್, ಪವನ್, ಜೀವನ್, ಆದಿಲ್, ಬೀದರ್ ಮಹಾನಗರ ಪಾಲಿಕೆ ಪೌರ ನೌಕರರ ಹಾಗೂ ಹೊರ ಗುತ್ತಿಗೆ ನೌಕರರ ಸಂಘದ ಪ್ರಮುಖರು ಮನವಿ ಮಾಡಿದ್ದಾರೆ.





