ಬೆಂಗಳೂರು, ಮಾ.24: ಆಧುನಿಕ ಅನುಭವ ಮಂಟಪ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ತಮ್ಮ ಕೋರಿಕೆಯ ಮೇರೆಗೆ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೆಚ್ಚುವರಿಯಾಗಿ 50 ಕೋಟಿ ರೂ.ಗಳನ್ನು ಪೂರಕ ಬಜೆಟ್ ನಲ್ಲಿ ನೀಡಿ, ಬಿಡುಗಡೆ ಮಾಡಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಈಶ್ವರ ಬಿ ಖಂಡ್ರೆ ಧನ್ಯವಾದ ಅರ್ಪಿಸಿದ್ದಾರೆ.
ಮುಂದಿನ ವರ್ಷ ಅಂದರೆ 2027ರ ಮಾರ್ಚ್ ತಿಂಗಳೊಳಗೆ ಆಧುನಿಕ ಅನುಭವ ಮಂಟಪ ಕಾಮಗಾರಿ ಪೂರ್ಣಗೊಳಿಸಲು ಸಂಕಲ್ಪ ಮಾಡಿದ್ದು, ಈ ನಿಟ್ಟಿನಲ್ಲಿ ಕಾಮಗಾರಿಯ ವೇಗ ಹೆಚ್ಚಿಸಲು ಹೆಚ್ಚುವರಿಯಾಗಿ 50 ಕೋಟಿ ಬಿಡುಗಡೆ ಮಾಡುವಂತೆ ತಾವು ಕೋರಿದ್ದು, ಮುಖ್ಯಮಂತ್ರಿಗಳು ಪೂರಕ ಬಜೆಟ್ ನಲ್ಲಿ ಅದಕ್ಕೆ ಅವಕಾಶ ಮಾಡಿ, ಹಣ ಬಿಡುಗಡೆ ಮಾಡಿದ್ದಾರೆ. ನಾವು ನುಡಿದಂತೆ ನಡೆದಿದ್ದೇವೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.
770 ಅಮರ ಗಣಂಗಳ ಹೆಸರಲ್ಲಿ ಅವರ ಚಿತ್ರವಿರುವ ಕಂಬಗಳಲ್ಲಿ 770 ವಚನಗಳನ್ನು ಕೆತ್ತಿಸಲಾಗಿದೆ. ವೈಜ್ಞಾನಿಕವಾಗಿ ಇಷ್ಟಲಿಂಗ ಪೂಜೆಯ ಪರಿಕಲ್ಪನೆಯನ್ನು ಈ ಆಧುನಿಕ ಅನುಭವ ಮಂಪಟದಲ್ಲಿ ಅಳವಡಿಸಲಾಗಿದೆ. ಕಾಮಗಾರಿ ಅತ್ಯಂತ ವೇಗವಾಗಿ ನಡೆಯುತ್ತಿದ್ದು, ಮುಂದಿನ ವರ್ಷ ಬಸವಜಯಂತಿಯೊಳಗೆ ಈ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡುವುದು ಸರ್ಕಾರದ ಸಂಕಲ್ಪವಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ತಿಳಿಸಿದ್ದಾರೆ.






