ಕನ್ನಡ ನಾಡಿನ ಸಾಂಸ್ಕೃತಿಕ ಇತಿಹಾಸದಲ್ಲಿ ಕೆಲವು ಮಹನೀಯರು ತಮ್ಮ ಕಾಲಕ್ಕೆ ಮಾತ್ರ ಸೀಮಿತರಾಗದೆ. ಸರ್ವಕಾಲಕ್ಕೂ ಮಾರ್ಗದರ್ಶಕರಾಗಿರುತ್ತಾರೆ. ಅಂತಹ ಮಹನೀಯರಲ್ಲಿ ಸಂತಕವಿ ಕನಕದಾಸರ ಸ್ಥಾನ ಅತ್ಯುನ್ನತವಾದುದು. ಇವರು ಕೇವಲ ಭಕ್ತ ಕವಿ ಮಾತ್ರವಲ್ಲದೆ ಸಾಮಾಜಿಕ ಸುಧಾರಕರು, ಮಾನವತಾವಾದಿಯೂ, ತತ್ವಜ್ಞಾನಿಯೂ, ದಾರ್ಶನಿಕ ಮತ್ತು ಜನಪರ ಚಿಂತಕರೂ ಆಗಿದ್ದರು. ಐದು ಶತಮಾನಗಳ ಹಿಂದೆ ಇವರು ಪ್ರತಿಪಾದಿಸಿದ ವಿಚಾರಗಳು ಇಂದಿಗೂ ಸಮಾಜಕ್ಕೆ ಅತ್ಯಂತ ಪ್ರಸ್ತುತವಾಗಿವೆ.
ಸದ್ಯ ಸಂತಕವಿ ಕನಕದಾಸ ಮತ್ತು ತತ್ತ್ವಪದಕಾರರ ಅಧ್ಯಯನ ಕೇಂದ್ರವು ಕನಕದಾಸರ ಜೀವನ, ತತ್ವ ಮತ್ತು ಮಾನವತಾವಾದಿ ಸಂದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ವಿಶೇಷ ನೃತ್ಯ ರೂಪಕವೊಂದನ್ನು ಸಿದ್ಧಪಡಿಸಿರುವುದು ಅತ್ಯಂತ ಅರ್ಥಪೂರ್ಣ ಮತ್ತು ಕಾಲೋಚಿತ ಪ್ರಯತ್ನವಾಗಿದೆ. ಸಾಹಿತ್ಯ, ಸಂಗೀತ ಮತ್ತು ನೃತ್ಯ ಸಂಗಮದ ಮೂಲಕ ಕನಕದಾಸರ ಸಂದೇಶವನ್ನು ಜನರಿಗೆ ತಲುಪಿಸುವ ಇಂತಹ ಕಾರ್ಯಕ್ರಮ ಕೇವಲ ಸಾಂಸ್ಕೃತಿಕ ಪ್ರದರ್ಶನವಾಗಿರದೆ, ಸಮಾಜಮುಖಿ ಜಾಗೃತಿಯ ಅಭಿಯಾನವೂ ಆಗಿದೆ.
15ನೇ ಮತ್ತು 16ನೇ ಶತಮಾನದ ನಡುವಿನ ಕಾಲಘಟ್ಟದಲ್ಲಿ ಜೀವಿಸಿದ್ದ ಕನಕದಾಸರು ಸಮಾಜದಲ್ಲಿ ನೆಲೆಯೂರಿದ್ದ ಜಾತಿ, ವರ್ಣ, ಕುಲ ಮತ್ತು ಧಾರ್ಮಿಕ ತಾರತಮ್ಯಗಳ ವಿರುದ್ಧ ದನಿ ಎತ್ತಿದ ಅಪರೂಪದ ಚಿಂತಕರಾಗಿದ್ದರು. ತಮ್ಮ ಜೀವನದಲ್ಲೇ ಹಲವು ಬಗೆಯ ಅವಮಾನಗಳನ್ನು ಎದುರಿಸಿದರೂ ದ್ವೇಷವಾಗಿ ಪರಿವರ್ತಿಸದೆ, ಸಮಾಜದ ಒಳಿತಿಗಾಗಿ ಚಿಂತನೆಯಾಗಿ ರೂಪಿಸಿದರು.
“ಕುಲ ಕುಲವೆಂದು ಹೊಡೆದಾಡದಿರಿ” ಎಂಬ ಕನಕರ ಸಂದೇಶ ಇಂದಿಗೂ ಸಮಾನತೆಯ ಘೋಷಣೆಯಾಗಿ ಕೇಳಿಸುತ್ತದೆ. ಮನುಷ್ಯನ ಶ್ರೇಷ್ಠತೆ ಅವನ ಜನ್ಮದಲ್ಲಿ, ಅವನ ಗುಣ ಮತ್ತು ಕರ್ಮದಲ್ಲಿದೆ ಎಂಬ ಸಂದೇಶವನ್ನು ಕೀರ್ತನೆಗಳ ಮೂಲಕ ಜನರಿಗೆ ತಲುಪಿಸಿದ್ದಾರೆ.
ಕನಕದಾಸರ ಭಕ್ತಿ ಅಂಧಭಕ್ತಿಯಲ್ಲ. ಅದು ಜ್ಞಾನ ಮತ್ತು ಮಾನವೀಯ ಮೌಲ್ಯಗಳೊಂದಿಗೆ ಬೆಸೆದುಕೊಂಡ ಭಕ್ತಿ. ದೇವರನ್ನು ಕಾಣುವುದಕ್ಕಿಂತ ಮೊದಲು ಮನುಷ್ಯನನ್ನು ಕಾಣಬೇಕು. ಮನುಷ್ಯನೊಳಗಿನ ದೈವತ್ವವನ್ನು ಅರಿಯಬೇಕು ಎಂಬುದು ಕನಕರ ತತ್ವದ ಸಾರವಾಗಿತ್ತು.
ಇನ್ನೂ ಕನ್ನಡ ಸಾಹಿತ್ಯಕ್ಕೆ ಕನಕದಾಸರು ನೀಡಿರುವ ಕೊಡುಗೆ ಅಪಾರವಾಗಿದೆ. “ನಳಚರಿತ್ರೆ”, “ಮೋಹನತರಂಗಿಣಿ”, “ಹರಿಭಕ್ತಿಸಾರ”, “ರಾಮಧಾನ್ಯ ಚರಿತ್ರೆ” ಎಂಬ ನಾಲ್ಕು ಮಹತ್ವದ ಕಾವ್ಯ ಕೃತಿಗಳ ಜೊತೆಗೆ 350ಕ್ಕೂ ಹೆಚ್ಚು ಕೀರ್ತನೆಗಳನ್ನು ರಚಿಸಿದ್ದರು.
ವಿಶೇಷವಾಗಿ “ರಾಮಧಾನ್ಯ ಚರಿತ್ರೆ” ಕೇವಲ ಸಾಹಿತ್ಯ ಕೃತಿಯಲ್ಲ, ಅದು ಸಾಮಾಜಿಕ ಸಮಾನತೆಯ ಘೋಷಣಾಪತ್ರವಾಗಿದೆ. ಶ್ರೀಮಂತ-ಬಡ, ಮೇಲು-ಕೀಳು ಎಂಬ ಭೇದಭಾವಗಳ ವಿರುದ್ಧ ಸಾರಿದ ಪ್ರತಿಭಟನೆ ಈ ಕೃತಿಯಲ್ಲಿ ಸ್ಪಷ್ಟವಾಗಿ ವ್ಯಕ್ತವಾಗಿದೆ.
ಇವರ ಕೀರ್ತನೆಗಳು ಜನಸಾಮಾನ್ಯರ ಭಾಷೆಯಲ್ಲಿ, ಸರಳವಾಗಿ ಮತ್ತು ಅರ್ಥಪೂರ್ಣವಾಗಿ ರಚನೆಯಾಗಿರುವುದರಿಂದ ಇಂದಿಗೂ ಜನಮಾನಸದಲ್ಲಿ ಜೀವಂತವಾಗಿವೆ.
ತಂತ್ರಜ್ಞಾನದಲ್ಲಿ ವಿಶ್ವ ಮುನ್ನಡೆದಿದ್ದರೂ, ಸಾಮಾಜಿಕವಾಗಿ ನಾವು ಇಂದಿಗೂ ಅನೇಕ ಬಗೆಯ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಜಾತಿ ಸಂಘರ್ಷಗಳು, ಧಾರ್ಮಿಕ ಅಸಹಿಷ್ಣುತೆ, ವರ್ಗಭೇದ, ದ್ವೇಷದ ರಾಜಕಾರಣ, ಸಾಮಾಜಿಕ ಅಸಮಾನತೆ ಇಂದಿಗೂ ಸಮಾಜವನ್ನು ಕಾಡುತ್ತಿದೆ.
ಇಂತಹ ಸಂದರ್ಭದಲ್ಲಿ ಕನಕದಾಸರ ಸಂದೇಶಗಳು ಅತ್ಯಂತ ಪ್ರಸ್ತುತವಾಗುತ್ತವೆ.
ಸಾಮರಸ್ಯ, ಸಹಬಾಳ್ವೆ, ಸಹಿಷ್ಣುತೆ ಮತ್ತು ಸೋದರತ್ವದ ಮೌಲ್ಯಗಳು ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿವೆ. ಭಿನ್ನಾಭಿಪ್ರಾಯಗಳನ್ನು ಸಂಘರ್ಷವಾಗಿ ಪರಿವರ್ತಿಸುವ ಬದಲು ಸಂವಾದದ ಮೂಲಕ ಪರಿಹರಿಸಬೇಕೆಂಬ ಕನಕದಾಸರ ತತ್ವ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಗೆ ದಾರಿದೀಪವಾಗಿದೆ.
ಸಾಮಾಜಿಕ ಜಾಲತಾಣಗಳ ಯುಗದಲ್ಲಿ ದ್ವೇಷದ ಭಾಷಣಗಳು ಹೆಚ್ಚುತ್ತಿರುವಾಗ, ಪ್ರೀತಿ ಮತ್ತು ಮಾನವೀಯತೆಯ ಮೂಲಕ ಸಮಾಜವನ್ನು ಕಟ್ಟಬೇಕೆಂಬ ಕನಕದಾಸರ ಸಂದೇಶ ಇನ್ನಷ್ಟು ಪ್ರಸ್ತುತವಾಗಿದೆ.
ಇಂತಹ ಮಹಾನ್ ಸಂತಕವಿಯ ಚಿಂತನೆಗಳನ್ನು ಇಂದಿನ ಪೀಳಿಗೆಗೆ ಪರಿಣಾಮಕಾರಿಯಾಗಿ ತಲುಪಿಸಲು ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ.ಚಿಕ್ಕಣ್ಣ ಅವರು ರೂಪಿಸಿರುವ ನೃತ್ಯ ರೂಪಕ ವಿಶಿಷ್ಟ ಪ್ರಯತ್ನದಿಂದ ಕೂಡಿದೆ.
ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದಿರುವ ಶ್ರೀಮತಿ ಸ್ನೇಹಾ ಕಪ್ಪಣ್ಣ ಅವರ ನೃತ್ಯ ಸಂಯೋಜನೆ, ಪ್ರಸಿದ್ಧ ಸಂಗೀತ ತಜ್ಞ ಡಾ. ಪ್ರವೀಣ್ ಡಿ. ರಾವ್ ಅವರ ಸಂಗೀತ ವಿನ್ಯಾಸ ಹಾಗೂ ಕಾ.ತ. ಚಿಕ್ಕಣ್ಣ ಅವರ ಪರಿಕಲ್ಪನೆ ಮತ್ತು ಸಾಹಿತ್ಯ ನೃತ್ಯ ರೂಪಕಕ್ಕೆ ವಿಶೇಷ ಮೆರುಗು ನೀಡಿವೆ.
ಭ್ರಮರಿ ಡ್ಯಾನ್ಸ್ ರೆಪರ್ಟರಿಯ ಕಲಾವಿದರು ಕನಕದಾಸರ ಕೀರ್ತನೆಗಳು ಮತ್ತು ಕಾವ್ಯ ಭಾಗಗಳನ್ನು ನೃತ್ಯದ ಮೂಲಕ ಜೀವಂತಗೊಳಿಸಲಿದ್ದಾರೆ. ಸಾಹಿತ್ಯ, ಸಂಗೀತ ಮತ್ತು ನೃತ್ಯದ ತ್ರಿವೇಣಿ ಸಂಗಮದಲ್ಲಿ ಕನಕದಾಸರ ಮಾನವತಾವಾದಿ ಚಿಂತನೆಗಳು ಪ್ರೇಕ್ಷಕರ ಮನಸ್ಸನ್ನು ತಟ್ಟಲಿವೆ.
ಕಾರ್ಯಕ್ರಮದ ಪ್ರಮುಖ ಉದ್ದೇಶ ಮನರಂಜನೆ ನೀಡುವುದಲ್ಲ. ಬದಲಾಗಿ ಕನಕದಾಸರ ಮಾನವತೆಯ ಸಂದೇಶವನ್ನು ಜನಮನದಲ್ಲಿ ಬಿತ್ತುವುದಾಗಿದೆ. ಸಮಾನತೆ ಮತ್ತು ಸಾಮರಸ್ಯದ ಮೌಲ್ಯಗಳನ್ನು ಪ್ರಚಾರ ಮಾಡುವುದು ಇದರ ಮೂಲ ಗುರಿಯಾಗಿದೆ.
ರಾಜ್ಯಾದ್ಯಂತ ಕಾರ್ಯಕ್ರಮ
ನೃತ್ಯ ರೂಪಕವು ರಾಜ್ಯದ ವಿವಿಧ ಭಾಗಗಳಲ್ಲಿ ಪ್ರದರ್ಶನಗೊಳ್ಳಲಿದ್ದು, ಸಹಸ್ರಾರು ಜನರಿಗೆ ಕನಕದಾಸರ ಸಂದೇಶವನ್ನು ಎಚ್.ಎಂ ರೇವಣ್ಣ ಅವರ ಸಾರಥ್ಯದಲ್ಲಿ ತಲುಪಿಸಲಿದೆ.
● ಜೂನ್ 16 – ಸಾಣೇಹಳ್ಳಿ, ಚಿತ್ರದುರ್ಗ
● ಜೂನ್ 17 – ದಾವಣಗೆರೆ
● ಜೂನ್ 22 – ಬೀದರ್
● ಜೂನ್ 23 – ಕಲಬುರಗಿ
● ಜೂನ್ 24 – ಇಳಕಲ್ಲು, ಬಾಗಲಕೋಟೆ
● ಜೂನ್ 25 – ರಾಯಚೂರು
● ಜೂನ್ 26 – ಕೊಪ್ಪಳ
● ಜೂನ್ 27 – ಬಳ್ಳಾರಿ
ಕನಕದಾಸರು ಕೇವಲ ಇತಿಹಾಸದ ಪುಟಗಳಲ್ಲಿ ಉಳಿದ ಸಂತಕವಿ ಅಲ್ಲ. ಅವರು ಇಂದಿನ ಸಮಾಜಕ್ಕೂ ಅಗತ್ಯವಾದ ಚಿಂತನೆಯ ಬೆಳಕು. ಅವರ ಸಂದೇಶಗಳಲ್ಲಿ ಮಾನವೀಯತೆ ಮಾತ್ರವಲ್ಲದೆ ಸಮಾನತೆ ಇದೆ. ಸಾಮಾಜಿಕ ನ್ಯಾಯದೊಂದಿಗೆ ಸಹಬಾಳ್ವೆಯ ಕನಸು ಇದೆ.
ಜಾತಿ, ಧರ್ಮ ಮತ್ತು ವರ್ಗಗಳ ಹೆಸರಿನಲ್ಲಿ ಸಮಾಜ ವಿಭಜನೆಯಾಗುತ್ತಿರುವ ಇಂತಹ ಹೊತ್ತಲ್ಲಿ ಕನಕದಾಸರ ತತ್ವಗಳು ಮತ್ತೆ ಮತ್ತೆ ಕೇಳಿಬರಬೇಕಾಗಿದೆ. ಅವರ ಕೀರ್ತನೆಗಳು ಮತ್ತೆ ಮತ್ತೆ ಹಾಡಲ್ಪಡಬೇಕಾಗಿದೆ. ಅವರ ಚಿಂತನೆಗಳು ಹೊಸ ಪೀಳಿಗೆಯ ಮನಸ್ಸಿನಲ್ಲಿ ಬೇರೂರಬೇಕಾಗಿದೆ.
ಕನಕದಾಸರು ಐದು ಶತಮಾನಗಳ ಹಿಂದೆ ಬದುಕಿದ್ದರೂ ಅವರ ವಿಚಾರಗಳು ಭವಿಷ್ಯದ ಸಮಾಜಕ್ಕೂ ದಾರಿದೀಪವಾಗಿವೆ. ಅವರು ಕಟ್ಟಲು ಬಯಸಿದ್ದು ಜಾತಿ-ಧರ್ಮಗಳಿಲ್ಲದ ಸಮಾಜ. ಅವರು ಕನಸು ಕಂಡಿದ್ದು ಸಹಬಾಳ್ವೆಯ ಭಾರತ.
ಅವರು ಸಾರಿದ್ದು ಮಾನವೀಯತೆಯ ಧರ್ಮ.
ನಾವಿಂದು ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರೆದರೂ, ಮಾನವೀಯ ಮೌಲ್ಯಗಳನ್ನು ಕಳೆದುಕೊಂಡರೆ ಅಂತಹ ಅಭಿವೃದ್ಧಿಗೆ ಅರ್ಥವಿಲ್ಲ. ಹೀಗಾಗಿ ಕನಕದಾಸರ ಕೀರ್ತನೆಗಳು ಕೇವಲ ಹಾಡುಗಳಲ್ಲ ಬದಲಿಗೆ ಸಮಾಜದ ಆತ್ಮಪರಿಶೀಲನೆಯ ಕನ್ನಡಿಗಳು.
ಕನಕರ ಸಾಹಿತ್ಯ ಕೇವಲ ಭಕ್ತಿ ಗ್ರಂಥವಲ್ಲ, ಅದು ಸಾಮಾಜಿಕ ನ್ಯಾಯದ ಪಾಠಪುಸ್ತಕ. ಅವರ ಜೀವನ ಕೇವಲ ಇತಿಹಾಸವಲ್ಲ, ಇಂದಿನ ಸಮಾಜಕ್ಕೆ ದಿಕ್ಕು ತೋರುವ ದೀಪಸ್ತಂಭ. ಹೀಗಾಗಿಯೇ ಕನಕದಾಸರು ಇಂದಿಗೂ ಜೀವಂತವಾಗಿದ್ದಾರೆ. ಅವರ ಸಂದೇಶ ಇಂದಿಗೂ ಪ್ರಸ್ತುತವಾಗುಳಿದಿದೆ. ಅವರ ತತ್ವಗಳು ಇಂದಿಗೂ ಅಗತ್ಯವಾಗಿವೆ.





