# ಎಚ್‌.ಎಂ. ರೇವಣ್ಣ ಅವರ ಪಕ್ಷ ನಿಷ್ಠೆಗೆ ಬೆಲೆ ಕೊಡಿ – Samruddiya Nele
ವಿಶೇಷ ವರದಿ

ಎಚ್‌.ಎಂ. ರೇವಣ್ಣ ಅವರ ಪಕ್ಷ ನಿಷ್ಠೆಗೆ ಬೆಲೆ ಕೊಡಿ

ಕರ್ನಾಟಕ ರಾಜಕೀಯದ ಇತಿಹಾಸವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಕಾಂಗ್ರೆಸ್ ಪಕ್ಷದ ಶಕ್ತಿ ನಾಯಕತ್ವದಲ್ಲಿ ಮಾತ್ರವಿಲ್ಲ; ಅದು ಸಮಾಜದ ವಿವಿಧ ವರ್ಗಗಳನ್ನು ಒಗ್ಗೂಡಿಸುವ ಸಾಮರ್ಥ್ಯದಲ್ಲಿದೆ.. ವಿಶೇಷವಾಗಿ ಹಿಂದುಳಿದ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತರನ್ನು ರಾಜಕೀಯವಾಗಿ ಒಂದೇ ವೇದಿಕೆಗೆ ತಂದಿದ್ದರಿಂದ ಕಾಂಗ್ರೆಸ್ ನಮ್ಮಲ್ಲಿ ಅಧಿಕಾರದ ಗದ್ದುಗೆಗೆ ಏರಲು ಸಾಧ್ಯವಾಗಿದೆ. ಇಂತಹ ಸಾಮಾಜಿಕ ಸಮೀಕರಣವನ್ನೇ “ಅಹಿಂದ” ಎಂಬ ರಾಜಕೀಯ ತತ್ವವಾಗಿ ರೂಪುಗೊಳಿಸಲಾಯಿತು. ಇಂತಹ ಅಹಿಂದ ರಾಜಕೀಯವನ್ನು ತಳಮಟ್ಟದಲ್ಲಿ ಜೀವಂತವಾಗಿಟ್ಟ ನಾಯಕರಲ್ಲಿ ಎಚ್.ಎಂ.ರೇವಣ್ಣ ಪ್ರಮುಖರೆಂಬುದನ್ನು ಮರೆಯಬಾರದು.

ಎಚ್.ಎಂ. ರೇವಣ್ಣ ಅವರು ಎಂದಿಗೂ ಪ್ರಚಾರಪ್ರಿಯ ರಾಜಕಾರಣಿಯಾಗಿರಲಿಲ್ಲ. ಮಾಧ್ಯಮಗಳ ಬೆಳಕಿನಲ್ಲಿ ಕಾಣಿಸಿಕೊಳ್ಳುವುದಕ್ಕಿಂತ ಸಂಘಟನೆ ಬಲಪಡಿಸುವ ಕಾಯಕದಲ್ಲೇ ಹೆಚ್ಚು ತೊಡಗಿಸಿಕೊಂಡವರು. ಕರ್ನಾಟಕ ಕಾಂಗ್ರೆಸ್ ನ ಒಳರಾಜಕೀಯವನ್ನು ಅರಿತವರಿಗೆ ಹಾಗೂ ಅಹಿಂದ ಸಂಘಟನೆಗಳ ಇತಿಹಾಸ ಅರಿತವರಿಗೆ ಅವರ ಪ್ರಭಾವ ಮತ್ತು ಸಂಘಟನಾ ಸಾಮರ್ಥ್ಯ ಗೊತ್ತಿರುತ್ತದೆ. ಅಹಿಂದ ಸಮುದಾಯಗಳ ರಾಜಕೀಯ ನಂಬಿಕೆಯನ್ನು ಕಾಪಾಡಿಕೊಳ್ಳಲು ತಮ್ಮ ಸಿರಿತನವನ್ನು ಬಿಟ್ಟು ಅವರು ವರ್ಷಗಳ ಕಾಲ ದುಡಿದಿದ್ದಾರೆ.

‘ಅಹಿಂದ’ ಎಂಬ ರಾಜಕೀಯ ಚಳವಳಿ

ಅಹಿಂದ ಎಂದರೆ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರ ಒಕ್ಕೂಟ. ಇದು ಚುನಾವಣಾ ತಂತ್ರ ಮಾತ್ರವಲ್ಲದೇ, ಸಮಾಜದ ಬಹುಸಂಖ್ಯಾತ ಕಾಯಕ ವರ್ಗಗಳಿಗೆ ರಾಜಕೀಯ ಧ್ವನಿ ನೀಡುವ ಪ್ರಯತ್ನವಾಗಿದೆ. ದೇವರಾಜ ಅರಸು ಅವರು ಬಿತ್ತಿದ ಸಾಮಾಜಿಕ ನ್ಯಾಯದ ಬೀಜವನ್ನು ಮುಂದಿನ ದಿನಗಳಲ್ಲಿ ಹಲವು ನಾಯಕರು ಬೆಳೆಸಿದರು. ವೀರಪ್ಪ ಮೋಯ್ಲಿ, ಎಸ್.ಬಂಗಾರಪ್ಪ ಮತ್ತು ಸಿದ್ದರಾಮಯ್ಯ ಅವರು ರಾಜಕೀಯ ಶಕ್ತಿಯನ್ನಾಗಿ ರೂಪಿಸಿದರು.

ಗೊತ್ತಿರಲಿ, ರಾಜಕೀಯ ತತ್ರಗಳು ಕೇವಲ ನಾಯಕರ ಭಾಷಣಗಳಿಂದ ಜೀವಂತವಾಗುವುದಿಲ್ಲ. ಅದು ಸಂಘಟನೆ, ಕಾರ್ಯಕರ್ತರ ಸಂಪರ್ಕ, ಸಮುದಾಯಗಳ ನಂಬಿಕೆ ಮತ್ತು ನಿರಂತರ ಸಂಪರ್ಕದ ಮೂಲಕ ಮಾತ್ರ ಬಲಗೊಳ್ಳುತ್ತವೆ. ಇದೇ ಕಾಯಕದಲ್ಲಿ ಎಚ್.ಎಂ. ರೇವಣ್ಣ ಅವರು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.

ರಾಜ್ಯದ ಉದ್ದಗಲ ಹಿಂದುಳಿದ ಜನಸಮುದಾಯದ ಸಭೆಗಳು, ಸಂಘಟನೆಗಳ ಸಮನ್ವಯ, ಸ್ಥಳೀಯ ಮುಖಂಡರ ಸಂಪರ್ಕ, ಅಹಿಂದ ಚಿಂತನೆಯ ಪ್ರಚಾರ- ಇವೆಲ್ಲದರ ಹಿಂದೆ ರೇವಣ್ಣ ಅವರ ಮೌನ ಶ್ರಮವಿದೆ.

ಸಂಕಷ್ಟದ ಕಾಲದಲ್ಲೂ ಕೈಬಿಡದ ಸಂಘಟಕ

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಹಲವು ಬಾರಿ ಅಧಿಕಾರ ಕಳೆದುಕೊಂಡಿದೆ. ಪಕ್ಷದೊಳಗಿನ ಬಣ ರಾಜಕೀಯ, ಜಾತಿ ಸಮೀಕರಣದ ಬದಲಾವಣೆ, ಭಾಜಪ ಮತ್ತು ಜೆಡಿಎಸ್ ಉದಯದ ನಡುವೆ ಕಾಂಗ್ರೆಸ್‌ ಅನೇಕ ಸವಾಲುಗಳನ್ನು ಎದುರುಗೊಂಡಿತ್ತು. ಅಂತಹ ಹೊತ್ತಲ್ಲೂ ಅಹಿಂದ ಮತಬ್ಯಾಂಕ್ ಸಂಪೂರ್ಣವಾಗಿ ಕಾಂಗ್ರೆಸ್ ಕೈತಪ್ಪದಂತೆ ಎಚ್.ಎಂ.ರೇವಣ್ಣ ನೋಡಿಕೊಂಡಿದ್ದರು. ಇವರ ತಳಮಟ್ಟದ ಸಂಘಟನೆಯ ಪಾತ್ರ ಬಹಳ ದೊಡ್ಡದಾಗಿದೆ.

ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ನಂತರ ಅಹಿಂದ ರಾಜಕೀಯಕ್ಕೆ ಹೊಸ ಚೈತನ್ಯ ದೊರಕಿತು. ಆದರೆ ಇಂತಹ ಚಿಂತನೆ ಜನರಿಗೆ ತಲುಪಿಸುವ ಕಾರ್ಯದಲ್ಲಿ ಎಚ್.ಎಂ. ರೇವಣ್ಣ ಅವರ ಪಾತ್ರ ಪ್ರಮುಖವಾದದ್ದಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಕಾಂಗ್ರೆಸ್‌ನ ಸಾಮಾಜಿಕ ನ್ಯಾಯದ ರಾಜಕೀಯಕ್ಕೆ ನೆಲೆಯೊದಗಿಸುವಲ್ಲಿ ಇವರ ಶ್ರಮ ಸ್ಮರಣೀಯವಾದದ್ದು.

ಗ್ಯಾರೆಂಟಿ ಯೋಜನೆಗಳ ಶಕ್ತಿ

2023ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಗ್ಯಾರೆಂಟಿ ಯೋಜನೆಗಳೇ ಪ್ರಮುಖ ಕಾರಣ.

ಚುನಾವಣಾ ಘೋಷಣೆಗಳನ್ನು ಜನಜೀವನದ ವಾಸ್ತವಿಕ ಲಾಭಗಳಾಗಿ ಪರಿವರ್ತಿಸುವುದು ದೊಡ್ಡ ಸವಾಲು. ಕರ್ನಾಟಕದಲ್ಲಿ ಇದನ್ನು ಸಾಧ್ಯವಾಗಿಸಿದ್ದು ಹೆಚ್.ಎಂ.ರೇವಣ್ಣ.

ರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ರಾಜ್ಯಾಧ್ಯಕ್ಷರಾಗಿ ಎಚ್.ಎಂ. ರೇವಣ್ಣ ಅವರು ರಾಜ್ಯಾದ್ಯಂತ ನಿರಂತರವಾಗಿ ಸಭೆಗಳನ್ನು ನಡೆಸಿದ್ದಾರೆ. ಹಾಗೆಯೇ ಕಾರ್ಯಕರ್ತರ ಸಮನ್ವಯ ಮತ್ತು ಜನಸಂಪರ್ಕದ ಮೂಲಕ ಯೋಜನೆಗಳ ಅನುಷ್ಠಾನಕ್ಕೆ ಬಲವನ್ನು ತುಂಬಿದ್ದಾರೆ.

ಗೃಹ ಲಕ್ಷ್ಮೀ ಯೋಜನೆಯ ಮೂಲಕ ಮಹಿಳೆಯರ ಕೈಗೆ ನೇರ ಹಣ ತಲುಪಿದೆ. ಶಕ್ತಿ ಯೋಜನೆ ಮಹಿಳೆಯರ ಸಂಚಾರ ಸ್ವಾತಂತ್ರ್ಯವನ್ನು ಹೆಚ್ಚಿಸಿದೆ. ಅನ್ನಭಾಗ್ಯ ಯೋಜನೆ ಬಡಕುಟುಂಬಗಳ ಆಹಾರ ಭದ್ರತೆಯನ್ನು ಬಲಪಡಿಸಿದೆ. ಯುವನಿಧಿ ಯೋಜನೆ ಯುವಕರಿಗೆ ಸಹಾಯವಾಗಿದೆ. ಇದು ಕೇವಲ ಸರ್ಕಾರಿ ಕಡತಗಳಲ್ಲಿ ಉಳಿಯದೇ ಜನರ ಬದುಕಿಗೆ ತಲುಪಲು ಎಚ್.ಎಂ.ರೇವಣ್ಣನವರ ಶ್ರಮ ಬಲು ದೊಡ್ಡದು.

ಮಹಿಳಾ ಮತದಾರರ ಮನಗೆದ್ದ ಯೋಜನೆಗಳು

ಕರ್ನಾಟಕ ರಾಜಕೀಯದಲ್ಲಿ ಮಹಿಳಾ ಮತದಾರರ ಪಾತ್ರ ಅತ್ಯಂತ ನಿರ್ಣಾಯಕವಾಗಿತ್ತು. ವಿಶೇಷವಾಗಿ ಗೃಹಲಕ್ಷ್ಮಿ ಮತ್ತು ಶಕ್ತಿ ಯೋಜನೆಗಳು ಮಹಿಳೆಯರಲ್ಲಿ ಕಾಂಗ್ರೆಸ್ ಸರ್ಕಾರದ ಬಗ್ಗೆ ವಿಶ್ವಾಸ ಹೆಚ್ಚಿಸಿವೆ. ಗ್ರಾಮೀಣ ಭಾಗಗಳಲ್ಲಿ ಗೃಹಲಕ್ಷ್ಮಿ ಹಣದಿಂದ ಮನೆ ಖರ್ಚು ನಿರ್ವಹಿಸಲು ಸಾಧ್ಯವಾಯಿತೆಂಬ ಅಭಿಪ್ರಾಯವೂ ಇದೆ.

ಸಣ್ಣ ವ್ಯಾಪಾರ, ಮಕ್ಕಳ ಶಿಕ್ಷಣ, ಆರೋಗ್ಯ ವೆಚ್ಚಗಳಿಗೆ ಗೃಹಲಕ್ಷ್ಮಿ, ಶಕ್ತಿ ಯೋಜನೆಗಳು ನೆರವಾಗಿವೆ. ಇವುಗಳ ಅನುಷ್ಠಾನದಲ್ಲಿ ಉಂಟಾದ ವಿಶ್ವಾಸವೇ ಕಾಂಗ್ರೆಸ್‌ ಸರ್ಕಾರಕ್ಕೆ ಸಾಮಾಜಿಕ ನೆಲೆಬಲ ಹೆಚ್ಚಿಸಿದೆ. ಇದಕ್ಕೆ ಎಚ್.ಎಂ.ರೇವಣ್ಣನವರ ಶ್ರಮ ಸ್ಮರಣೀಯ ಮತ್ತು ಶ್ಲಾಘನೀಯವೂ ಆಗಿದೆ.

ಆರ್ಥಿಕತೆ ಮತ್ತು ಗ್ಯಾರೆಂಟಿ

ಗ್ಯಾರೆಂಟಿ ಯೋಜನೆಗಳ ವಿರುದ್ಧ ಆರಂಭದಲ್ಲಿ ಆರ್ಥಿಕ ಹೊರೆ ಎಂಬ ಟೀಕೆ ಕೇಳಿಬಂದಿತ್ತು. ಸಾಮಾಜಿಕ ಭದ್ರತೆ ಮತ್ತು ಖರೀದಿ ಸಾಮರ್ಥ್ಯ ಹೆಚ್ಚಿದಾಗ ಆರ್ಥಿಕ ಚಟುವಟಿಕೆಗಳೂ ವೃದ್ಧಿಯಾಗುತ್ತವೆ ಎಂಬುದನ್ನು ಗ್ಯಾರೆಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾಗಿ ಹೆಚ್.ಎಂ.ರೇವಣ್ಣ

ಬಹಳ ಪ್ರಬಲವಾಗಿ ಅರಿವು ಮೂಡಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಹಣದ ಹರಿವು ಹೆಚ್ಚಿರುವುದು, ಸಣ್ಣ ವ್ಯಾಪಾರಗಳಿಗೆ ಉತ್ತೇಜನ ಸಿಕ್ಕಿರುವುದು, ಮಹಿಳಾ ಆರ್ಥಿಕ ಪಾಲ್ಗೊಳ್ಳುವಿಕೆ ಹೆಚ್ಚಿರುವುದು ರೇವಣ್ಣ ಅವರ ವಾದಗಳಿಗೆ ಬಲ ಕೊಟ್ಟಿದೆ.

ಹೀಗಾಗಿಯೇ ಗ್ಯಾರೆಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಎಚ್.ಎಂ.ರೇವಣ್ಣ ಅವರ ಪಾತ್ರವನ್ನು ಕಾಂಗ್ರೆಸ್ ಒಳಗೆ ಹಲವು ನಾಯಕರು ಗುರುತಿಸುತ್ತಿದ್ದಾರೆ. “ಯೋಜನೆ ಘೋಷಿಸುವುದು ಸುಲಭ, ಆದರೆ ಮನೆಮನೆಗಳಿಗೆ ತಲುಪಿಸುವುದು ಕಷ್ಟ’ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ರೇವಣ್ಣನವರಿಗೆ ಸಚಿವ ಸ್ಥಾನ

ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್‌ರಚನೆ ಚರ್ಚೆಯಾಗುತ್ತಿರುವ ಹೊತ್ತಲ್ಲಿ ಎಚ್.ಎಂ. ರೇವಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕೆಂಬ ಒತ್ತಾಯ ಹೆಚ್ಚುತ್ತಿದೆ. ಇದು ಕೇವಲ ವ್ಯಕ್ತಿ ಗೌರವದ ವಿಚಾರವಲ್ಲ ಬದಲಿಗೆ ಅಹಿಂದ ವರ್ಗದ ರಾಜಕೀಯಕ್ಕೆ ನೀಡುವ ಸಂದೇಶವೂ .

ಕಾಂಗ್ರೆಸ್ ಪಕ್ಷ ಅಹಿಂದ ರಾಜಕೀಯವನ್ನು ತನ್ನ ಮೂಲ ಶಕ್ತಿಯೆಂದು ಪರಿಗಣಿಸುವುದೇ ಆದರೆ ದಶಕಗಳ ಕಾಲ ದುಡಿದ ನಾಯಕರಿಗೆ ಸೂಕ್ತ ಸ್ಥಾನಮಾನ ನೀಡಬೇಕೆಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಅದರಲ್ಲೂ 2028ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಂಡಾಗ ಅಹಿಂದ ಮತಬ್ಯಾಂಕ್ ಕಾಂಗ್ರೆಸ್ ಗೆ ಅತ್ಯಂತ ಪ್ರಮುಖವಾಗಿದೆ.

ಇಂತಹ ಹೊತ್ತಲ್ಲಿ ಎಚ್.ಎಂ. ರೇವಣ್ಣ ಅವರಿಗೆ ಸಚಿವ ಸ್ಥಾನ ನೀಡುವುದು ಅಹಿಂದ ಸಮುದಾಯದಲ್ಲಿ

ಕಾಂಗ್ರೆಸ್‌ನ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸಬಹುದು. ಇದು ಕೇವಲ ಒಬ್ಬ ನಾಯಕರಿಗೆ ದೊರೆಯುವ ಸ್ಥಾನವಲ್ಲ; ಅದು ಸಂಘಟನಾ ಶ್ರಮಕ್ಕೂ ಸಿಗುವ ಗೌರವವಾಗಿದೆ.

ಅಹಿಂದ ರಾಜಕೀಯದ ಭವಿಷ್ಯ

ಇಂದು ಕರ್ನಾಟಕ ರಾಜಕೀಯದಲ್ಲಿ ಜಾತಿ ಸಮೀಕರಣ ಎಂಬುದು ವೇಗವಾಗಿ ಬದಲಾಗುತ್ತಿವೆ. ಹೊಸ ತಲೆಮಾರಿನ ಮತದಾರರು, ನಗರೀಕರಣ, ಆರ್ಥಿಕ ಬದಲಾವಣೆ ಹಾಗೂ ರಾಜಕೀಯದ ಸ್ವರೂಪವನ್ನೇ ಬದಲಿಸುತ್ತಿವೆ. ಆದರೂ ಸಾಮಾಜಿಕ ನ್ಯಾಯದ ರಾಜಕೀಯ ಇನ್ನೂ ಪ್ರಸ್ತುತವಾಗಿಯೇ ಉಳಿದುಕೊಂಡಿದೆ.

ಅಹಿಂದ ರಾಜಕೀಯವನ್ನು ಮುಂದಿನ ತಲೆಮಾರಿಗೆ ತಲುಪಿಸಲು ಕೇವಲ ಘೋಷಣೆ ಮಾತ್ರ ಸಾಕಾಗುವುದಿಲ್ಲ. ಸಂಘಟನೆಯ ನಿರಂತರತೆ ಮತ್ತು ವಿಶ್ವಾಸಾರ್ಹತೆ ಹೆಚ್ಚಿಸಲು ಎಚ್.ಎಂ.ರೇವಣ್ಣ ಅವರಂತಹ ನಾಯಕರು ಸಚಿವರಾಗಬೇಕಿದೆ.

ಒಟ್ಟಿನಲ್ಲಿ, ಕರ್ನಾಟಕ ಕಾಂಗ್ರೆಸ್ ನ ಅಹಿಂದ ರಾಜಕೀಯದ ಹಿಂದೆ ಇರುವ ಮೌನಶಕ್ತಿಯಾಗಿ ಎಚ್.ಎಂ.

ರೇವಣ್ಣ ಅವರನ್ನು ಕಾಣಲಾಗುತ್ತಿದೆ. ಗ್ಯಾರೆಂಟಿ ಯೋಜನೆಗಳ ಯಶಸ್ಸು ತಳಮಟ್ಟದ ಸಂಘಟನೆ ಮತ್ತು ಹಿಂದುಳಿದ ವರ್ಗಗಳ ಒಗ್ಗೂಡಿಕೆಯಲ್ಲಿ ಅವರ ಪಾತ್ರ ದೊಡ್ಡದು. ಅವರಿಗೆ ಸಚಿವ ಸ್ಥಾನ ನೀಡಬೇಕೆಂಬ ಒತ್ತಾಯ ಕೇವಲ ರಾಜಕೀಯ ಚರ್ಚೆಯಾಗಿ ಉಳಿದಿಲ್ಲ. ಕಾಂಗ್ರೆಸ್ ತನ್ನ ಸಾಮಾಜಿಕ ನ್ಯಾಯದ ಬದ್ಧತೆಯನ್ನು ಎಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತದೆ ಎಂಬುದರ ಮೇಲೆ ನಿಂತಿದೆ.

ಲೇಖಕರು- ಎಂ.ಎಸ್. ನವ್ಯ

Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

शेअर करा.

Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

Related Articles

Leave a Reply

Your email address will not be published. Required fields are marked *

Back to top button
Don`t copy text!