# *ಬೀದರ ಜಿಲ್ಲೆಯು ಸಮಾನತೆ ಸಾರಿದ ಪವಿತ್ರ ನಾಡು-ಉಪರಾಷ್ಟ್ರಪತಿ     *ಸಿ.ಪಿ.ರಾಧಾಕೃಷ್ಣನ್* – Samruddiya Nele
ವಿಶೇಷ ವರದಿ

*ಬೀದರ ಜಿಲ್ಲೆಯು ಸಮಾನತೆ ಸಾರಿದ ಪವಿತ್ರ ನಾಡು-ಉಪರಾಷ್ಟ್ರಪತಿ     *ಸಿ.ಪಿ.ರಾಧಾಕೃಷ್ಣನ್*

ಬೀದರ, ಏಪ್ರಿಲ್.22 (ಕರ್ನಾಟಕ ವಾರ್ತೆ):- ಬೀದರ ಜಿಲ್ಲೆಯ ಶಿವಯೋಗಿ ಶರಣರು, ಸಂತರು, ಬಸವೇಶ್ವರರು ಬಾಳಿ ಸಮಾನತೆ ಸಾರಿದ ಪವಿತ್ರ ನಾಡು ಎಂದು ಉಪರಾಷ್ಟ್ರಪತಿ  ಸಿ.ಪಿ.ರಾಧಾಕೃಷ್ಣನ್ ಹೇಳಿದರು.

 ಭಾಲ್ಕಿ ಪಟ್ಟಣದ ಚನ್ನಬಸವಾಶ್ರಮದಲ್ಲಿ ಇಂದು ಏರ್ಪಡಿಸಿದ್ದ ಭಾಲ್ಕಿ ಹಿರೇಮಠ ಸಂಸ್ಥಾನದ ಹಿರಿಯ ಸ್ವಾಮಿಜಿ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು..

 ಐತಿಹಾಸಿಕವಾಗಿ, ಸಮಸಮಾನತೆ, ಸಾಮಾಜಕ ಕ್ರಾಂತಿ, ಧಾರ್ಮಿಕ ಕ್ರಾಂತಿ, ಸಮಾಜ ಸುಧಾರಣೆಗೆ ಶ್ರಮಿಸಿದ ವಿಶ್ವಗುರು ಬಸವಣ್ಣ ಅವರ ನಾಡಿನಲ್ಲಿ ಬಸವಾದಿ ಶರಣರ ಆಶಯಗಳಂತೆ ಭಾಲ್ಕಿ ಹಿರೇಮಠ ಸೇವೆ ಸಲ್ಲಿಸುತ್ತಿದೆ. ಹಿರಿಯ ಸ್ವಾಮಿಜಿಗಳು ಬಸವಣ್ಣನ ತತ್ವ ಆದರ್ಶಗಳಂತೆ ಸತ್ಯ, ಸೇವೆ, ಮಾನವೀಯ ನೆಲೆಗಟ್ಟಿನಲ್ಲಿ ಸೇವೆ ಮಾಡುತ್ತಿರುವುದು ಹಾಗೂ ಅವರನ್ನು ಗೌರವಿಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು. 

 ಹಿರಿಯ ಸ್ವಾಮಿಗಳಾದ ಡಾ.ಚನ್ನಬಸವ ದೇವರು ತಮ್ಮ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿರಲಿಲ್ಲ, ದಿನಾಚರಣೆ ದಿನ ನಿರಾಶ್ರಿತರಿಗೆ ಅನಾಥ, ದೀನ ದಲಿತರ ಸೇವೆಗೆ ಅರ್ಪಿಸಿದರು. ಕರುಣೆ ಸೇವೆಯ ನಿಜ ದಾರ್ಶನಿಕರಾಗಿದ್ದರು. ಅಸಾಧಾರಣ ಮಾನವೀಯ ಗುಣಧರ್ಮವುಳ್ಳವರಾಗಿದ್ದರು. ಅನ್ನ ದಾಸೋಹ ಹಾಗೂ ಅಕ್ಷರ ದಾಸೋಹದಿಂದ ಕ್ರಾಂತಿ ಮಾಡಿದರು. ಈಗಿನ ಸ್ವಾಮಿಗಳು ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ 60 ಶಿಕ್ಷಣ ಸಂಸ್ಥೆಗಳಲ್ಲಿ 20 ಸಾವಿರ ವಿದ್ಯಾರ್ಥಿಗಳ ಜೀವನವನ್ನು ಈ ಹಿಂದುಳಿದ ಭಾಗದಲ್ಲಿ ಸುಧಾರಿಸಿದರು. ಶರಣ ತತ್ವ ಸಾಹಿತ್ಯ ಪ್ರವಚನ ಮೂಲಕ ಅಧ್ಯಾತ್ಮಿಕ ಕ್ರಾಂತಿ ಮಾಡಿದ್ದಾರೆ ಎಂದರು.

 ನಾಗರಿಕ ಸೇವಾ ದಿನಾಚರಣೆಯೆಂದು ನಿನ್ನೆ ತಾವು ನಾಗರಿಕ ಸೇವೆಗಳಲ್ಲಿ ಮಹಿಳೆಯರ ಪಾತ್ರ ಕುರಿತು ಮಾತನಾಡಿದ್ದೆನು. ಬೀದರ ಜಿಲ್ಲೆಯ ಜಿಲ್ಲಾಧಿಕಾರಿಗಳು ಮಹಿಳೆಯೇ ಆಗಿರುವುದು ಸಂತೋಷ ಎಂದರು. ಧಾರ್ಮಿಕ ಕೇಂದ್ರಗಲು ಭಾರತೀಯ ಅಧ್ಯಾತ್ಮಿಕ ಸಮ ಸಮಾಜದ ಪರಂಪರೆಯನ್ನು ಮುಂದುರೆಸುತ್ತಿವೆ ಎಂದರು.

 ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ಮಾತನಾಡಿ, ಬಸವಕಲ್ಯಾಣದ ಬಸವಾದಿ ಶರಣರ ಆದರ್ಶ, ತತ್ವ ಮಾರ್ಗದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಚನ್ನಬಸವ ಪಟ್ಟದೇವರು ಸಂಚರಿಸಿದ ಸಮಾಜ ಸುಧಾರಣೆಯ ನಾಡು ಇದು. ತ್ಯಾಗ, ಕರುಣೆ ಸೇವೆಯ ಸಾಕಾರ ಮೂರ್ತಿ ಆಗಿದ್ದಾರೆ. ಸಮಾಜ ಸೇವೆ, ಶೈಕ್ಷಣಿಕ ಧಾರ್ಮಿಕ ಸೇವೆ ಕೈಗೊಳ್ಳುತ್ತಿರುವ ಸಮಾಜದ ಸುಧಾರಕ ಎಂದು ಸಂತೋಷ ವ್ಯಕ್ತಪಡಿಸಿದರು.

 ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿ, ಬಸವಾದಿ ಶರಣರ ವಿಚಾರ ಧಾರೆ ಇಡೀ ಪ್ರಪಂಚಕ್ಕೆ ಪ್ರಚಾರ ಆಗಬೇಕಿದೆ ಎಂದರು. ಬುದ್ದ, ಬಸವ, ಅಂಬೇಡ್ಕರ್ ಚಿಂತನೆಯ ಆದರ್ಶ, ತತ್ವಗಳು ಯುವ ಸಮಾಜದಲ್ಲಿ ಹೆಚ್ಚೆಚ್ಚು ಪ್ರಚಾರಗೊಳ್ಳಬೇಕಿದೆ. ವಿಚಾರ, ಆಚಾರ, ಪ್ರಚಾರ ಅತೀ ಮುಖ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಅವರು ಮಾತನಾಡಿ, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಗೆ ವಿಶ್ವಗುರು ಬಸವಣ್ಣನವರ ದಾಸೋಹ ಪ್ರೇರಣೆಯಾಗಿದೆ. ಬಸವಣ್ಣನವರು ಕಾಯಕವೇ ಕೈಲಾಸ ಎಂಬ ಸಂದೇಶದೊAದಿಗೆ ದುಡಿಯಬೇಕು, ದುಡಿದು ಗಳಿಸಬೇಕು, ಗಳಿಸಿದ್ದನ್ನು ಉಳಿಸಬೇಕು, ಉಳಿಸಿದ್ದನ್ನು ದಾಸೋಹದ ಮೂಲಕ ಸಮಾಜಕ್ಕೆ ಮರಳಿ ನೀಡಬೇಕು ಎಂದು ಸಾರಿದರು. ಅವರ ಜಯಂತಿಯನ್ನು ಈ ಕಾರ್ಯಕ್ರದ ಜೊತೆಗೆಯಲ್ಲಿ ಆಚರಿಸುತ್ತಿರುವುದು ಅರ್ಥಪೂರ್ಣ ಎಂದರು.

ನಮ್ಮ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಬಸವಾದಿ ಪ್ರಮಥರು ಅನುಭವಮಂಟಪದಲ್ಲಿ ಎಲ್ಲ, ಜಾತಿ ಜನಾಂಗದವರಿಗೂ ಸಮಾನ ಅವಕಾಶ ನೀಡಿದ್ದರು. ಇಲ್ಲಿ ಲಿಂಗ ತಾರತಮ್ಯವೂ ಇರಲಿಲ್ಲ, ಅಕ್ಕಮಹಾದೇವಿ, ಸತ್ಯಕ್ಕ, ಐದಕ್ಕಿ ಲಕ್ಕಮ್ಮ, ನೀಲಾಂಬಿಕೆ, ಮುಕ್ತಾಯಕ್ಕ ಮೊದಲಾದವರು ತಮ್ಮ ವಿಚಾರಧಾರೆಗಳನ್ನು ಮುಂಡಿಸುತ್ತಿದ್ದರು. ಇದು ಮಹಿಳಾ ಸಬಲೀಕರಣದ ಸಂಕೇತವಾಗಿದ್ದು, ನಮ್ಮ ಸರ್ಕಾರ ಗೃಹಲಕ್ಷ್ಮೀ, ಶಕ್ತಿ ಯೋಜನೆಯ ಮೂಲಕ ಮುಂದುವರಿಸಿದೆ. ಇಂದು ನಾವು ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಶತಾಯುಷಿ ಶ್ರೀ ಚನ್ನಬಸವ ಪಟ್ಟದ್ದೇವರ 27ನೇ ಸಂಸ್ಮರಣೋತ್ಸವ ನಡೆಸುತ್ತಿದ್ದೇವೆ. ಅವರು, ಕ್ರಾಂತಿಪುರುಷರು. ಮುಟ್ಟಿತಟ್ಟಿಯಂತಹ ಅಸ್ಪೃಶ್ಯತೆಯ ಆಚರಣೆ ತೊಡೆದುಹಾಕಲು ನಮ್ಮ ತಂದೆ ಲಿಂಗೈಕ್ಯ ಲೋಕನಾಯಕ ಡಾ. ಭೀಮಣ್ಣ ಖಂಡ್ರೆ ಅವರಿಗೆ ಬೆಂಬಲವಾಗಿ ನಿಂತು ಭಾಲ್ಕೇಶ್ವರ ದೇವಾಲಯಕ್ಕೆ ಅಶೋಕನಗರ ನಿವಾಸಿಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಿದರು. ಇಂದು ನಾವು ಕಾಣುತ್ತಿರುವ ಶಿವಲಿಂಗದಾಕಾರದ ಅನುಭವ ಮಂಟಪದ ನಿರ್ಮಾದ ಶ್ರೇಯಸ್ಸು ಚನ್ನಬಸವಪಟ್ಟದ್ದೇವರಿಗೆ ಸಲ್ಲುತ್ತದೆ ಎಂದರು.

ನಿಜಾಮರ ಆಳ್ವಿಕೆಯ ಕಾಲದಲ್ಲಿ ಬೀದರ್‌ನಲ್ಲಿ ಕನ್ನಡ ಕಲಿಸಲು ಅವಕಾಶ ಇರಲಿಲ್ಲ. ಆಗ ಹೊರಗೆ ಉರ್ದು ಫಲಕ ಹಾಕಿ ಒಳಗೆ ಕನ್ನಡ ಕಲಿಸಲು ಶ್ರಮಿಸಿದ ಪಟ್ಟದ್ದೇವರು, ಬೀದರ್ ಮಕ್ಕಳಿಗೆ ವಚನ ಸಾರ ತಿಳಿಯುವಂತೆ ಮಾಡಿದ್ದರು. ತಮ್ಮ ದೀಕ್ಷಾ ಗುರು ಚನ್ನಬಸವ ಪಟ್ಟದ್ದೇವರ ಶತಮಾನೋತ್ಸವವನ್ನು ಭೀಮಣ್ಣ ಖಂಡ್ರೆ ಅವರು ಅದ್ಧೂರಿಯಾಗಿ ನಡೆಸಿದ್ದರು, ಆಗ ಅಂದಿನ ರಾಷ್ಟ್ರಪತಿ ಡಾ. ಶಂಕರದಯ್ಯಾಳ್ ಶರ್ಮಾ ಆಗಮಿಸಿದ್ದರು. ಇಂದಿನ ಪೀಠಾಧಿಪತಿಗಳ ಅಮೃತ ಮಹೋತ್ಸವಕ್ಕೆ ಉಪ ರಾಷ್ಟ್ರಪತಿಗಳು ಆಗಮಿಸಿರುವುದು ಯೋಗಾಯೋಗ ಎಂದು ಈಶ್ವರ ಖಂಡ್ರೆ ಹೇಳಿದರು.

ನಾಡೋಜ ಬಸವಲಿಂಗ ಪಟ್ಟದ್ದೇವರು, ಮಾಸಿಕ ಶರಣ ಸಂಗಮ, ಶಿವಾನುಭವ ಪ್ರವಚನ, ವಚನ ಗಾಯನದಂತಹ ಕಾರ್ಯಕ್ರಮಗಳ ಮೂಲಕ ಶರಣರ ವಚನಗಳ ಪ್ರಚಾರ ಪ್ರಸಾರ ಮಾಡುತ್ತಿದ್ದಾರೆ, ಸರಳ ಸಾಮೂಹಿಕ ವಿವಾಹಗಳನ್ನು ಆಯೋಜಿಸುವ ಮೂಲಕ ಬಡವರರು ಸಾಲದ ಸುಳಿಗೆ ಸಿಲುಕದಂತೆ ರಕ್ಷಿಸಿದ್ದಾರೆ. ಇವರ ಸಾಧನೆಗಳನ್ನು ಗುರುತಿಸಿ ಹಂಪಿ ವಿಶ್ವವಿದ್ಯಾಲಯ ಅವರಿಗೆ ನಾಡೋಜ ಗೌರವ ನೀಡಿದೆ. ಅವರು ನೂರ್ಕಾಲ ಬಾಳಲಿ ನಮಗೆ ಮಾರ್ಗದರ್ಶನ ನೀಡಲಿ. ಭಾಲ್ಕಿಯ ಮಣ್ಣಿನ ಮಗನಾದ ಎ.ಐ.ಸಿ.ಸಿ. ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಯತ್ನದ ಫಲವಾಗಿ ಕಲ್ಯಾಣ ಕರ್ನಾಟಕಕ್ಕೆ 371 ಜೆ ಸಾಂವಿಧಾನಿಕ ತಿದ್ದುಪಡಿಯೊಂದಿಗೆ ವಿಶೇಷ ಸ್ಥಾನಮಾನ ದೊರಕಿದೆ. ಇಂದು ಅದು ಕಾಯಿದೆಯಾಗಿದ್ದು ನಮ್ಮ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದರು. 

ಬುದ್ಧ, ಬಸವ, ಅಂಬೇಡ್ಕರ್ ಅವರ ಅನುಯಾಯಿಯಾದ ಮಲ್ಲಿಕಾರ್ಜುನ ಖರ್ಗೆ ಅವರು, ತಮ್ಮ ಜೀವನದ ಉದ್ದಕ್ಕೂ ವಂಚಿತರಿಗೆ, ನೊಂದವರಿಗೆ ನ್ಯಾಯದೊರಕಿಸಲು ಹಾಗೂ ಸರ್ವರ ಸಮಾನತೆಗಾಗಿ ಶ್ರಮಿಸುತ್ತಿದ್ದಾರೆ, ಅವರು ಒಬ್ಬ ಮುತ್ಸದ್ದಿ ರಾಜಕಾರಣಿ ಎಂದು ಬಣ್ಣಿಸಿದರು.

Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

शेअर करा.

Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

Related Articles

Leave a Reply

Your email address will not be published. Required fields are marked *

Back to top button
Don`t copy text!